ADVERTISEMENT

ಇತಿಹಾಸ ಪ್ರಸಿದ್ಧ ವೆಂಕಟರಮಣಸ್ವಾಮಿ ದೇಗುಲ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:10 IST
Last Updated 8 ಅಕ್ಟೋಬರ್ 2011, 9:10 IST

ಒಂದು ಸಾವಿರ ವರ್ಷದ ಇತಿಹಾಸವಿರುವ ಬಸವಾಪಟ್ಟಣದ ವೆಂಕಟರಮಣಸ್ವಾಮಿ ದೇಗುಲ ಚಾಲುಕ್ಯ ಶೈಲಿಯ ಅಪರೂಪದ ವಾಸ್ತುಶಿಲ್ಪದಿಂದ ಕೂಡಿದ್ದು, ನೋಡುಗರನ್ನು ತನ್ನತ್ತ ಸೆಳೆಯುವ ಆಕರ್ಷಣೆಯನ್ನು ಹೊಂದಿದೆ.

ಹಿಂದೊಮ್ಮೆ ಪಾಳೆಯಪಟ್ಟಾಗಿ ಮೆರೆದ ಬಸವಾಪಟ್ಟಣವು `ಲಕ್ಷಮನೆಗಳ ಬೀಡು~ ಎಂದೇ ಹೆಸರಾಗಿದ್ದು, ಇಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಲವಾರು ಮಠಗಳಿವೆ. ಇದರೊಂದಿಗೆ ಐತಿಹಾಸಿಕ ಹಿನ್ನೆಲೆಯುಳ್ಳ ಶಿವ, ವಿಷ್ಣು ದೇವಾಲಯಗಳೂ ಕಂಡುಬರುತ್ತವೆ. ಅವುಗಳಲ್ಲಿ ವೆಂಕಟರಮಣಸ್ವಾಮಿ ದೇಗುಲವೂ ಒಂದು.

ಗ್ರಾನೈಟ್ ಕಲ್ಲುಗಳಿಂದ ಕಟ್ಟಲ್ಪಟ್ಟ ದೇಗುಲದಲ್ಲಿ ಎರಡು ಗರ್ಭಗುಡಿಗಳಿದ್ದು, ವೆಂಕಟರಮಣ ಸ್ವಾಮಿಯು ಪೂರ್ವಾಭಿಮುಖವಾಗಿರುವ ಗರ್ಭಗುಡಿಯಲ್ಲಿ ನಾಲ್ಕು ಅಡಿ ಎತ್ತರದ ಪೀಠದ ಮೇಲೆ ವಿರಾಜಮಾನವಾಗಿದ್ದಾನೆ. ಮೂರ್ತಿಯ ಎತ್ತರ ಕೇವಲ ಎರಡು ಅಡಿಯಿದ್ದು ತುಂಬಾ ಸುಂದರವಾಗಿದೆ. ಹೊರಬಾಗಿಲಿನಲ್ಲಿ ದ್ವಾರಪಾಲಕರಾದ ಮೂರೂವರೆ ಅಡಿ ಎತ್ತರದ ಜಯ-ವಿಜಯರ ಸುಂದರ ಮೂರ್ತಿಗಳಿವೆ.

ಸುಕನಾಸಿಯ ದಕ್ಷಿಣಕ್ಕೆ ಲಕ್ಷ್ಮೀದೇವಿಯ ಇನ್ನೊಂದು ಗರ್ಭಗುಡಿ ಇದ್ದು, ಅದರಲ್ಲಿರುವ ಎರಡು ಅಡಿ ಪೀಠದ ಮೇಲೆ ಸುಂದರ ಲಕ್ಷ್ಮೀ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದಕ್ಷಿಣ ದಿಕ್ಕಿಗೂ ಒಂದು ಬಾಗಿಲನ್ನು ಅಳವಡಿಸಲಾಗಿದ್ದು, ಪೂರ್ವ ಮತ್ತು ದಕ್ಷಿಣ ದಿಕ್ಕುಗಳಿಂದಲೂ ದೇವಾಲಯ ಪ್ರವೇಶ ಮಾಡಬಹುದಾಗಿದೆ.

ಸುಕನಾಸಿಯು ನವರಂಗದಷ್ಟೇ ದೊಡ್ಡದಾಗಿದ್ದು, ಬೃಹತ್ತಾದ ಎರಡು ಕಂಬಗಳ ಆಧಾರದಲ್ಲಿ ದೇವಾಲಯ ನಿಂತಿರುವುದು ಕಂಡುಬರುತ್ತದೆ. ಮುಂದಿನ ಬಾಗಿಲಿನ ಇಕ್ಕೆಲಗಳಲ್ಲಿ ಸುಕನಾಸಿಗೆ ಬೆಳಕು ಬೀಳಲು ಜಾಲಂದ್ರದ ವ್ಯವಸ್ಥೆ ಮಾಡಲಾಗಿದೆ.

ದೇಗುಲದ ಮುಂಭಾಗದಲ್ಲಿ ಚೌಕಾಕಾರದ ನಾಲ್ಕು ಕಂಬಗಳು ವಿಶಿಷ್ಟ ಕೆತ್ತನೆಯಿಂದ ಕೂಡಿವೆ. ದೇಗುಲದ ಮುಂದೆ ಬೃಹತ್ತಾದ ಅಶ್ವತ್ಥಕಟ್ಟೆಯಿದ್ದು, ಅದರಲ್ಲಿ 10 ಅಡಿ ಎತ್ತರದ ಗರುಡಗಂಭವಿದೆ. ಈ ಕಂಬದಲ್ಲಿ ಸುಂದರವಾದ ಗರುಡನ ಮೂರ್ತಿ ಮತ್ತು ದ್ರಾವಿಡ ಭಾಷೆಯ ಶಿಲಾಶಾಸನಗಳಿವೆ.
ಈ ಗರುಡಗಂಭವನ್ನು ದೀಪಮಾಲೆಯ ಕಂಬದಂತೆ ನಿರ್ಮಿಸಿರುವುದು ಇನ್ನೊಂದು ವಿಶೇಷವಾಗಿದೆ.

ದೇವಾಲಯದ ಪ್ರಾಕಾರವು ದೊಡ್ಡದಾಗಿದ್ದು, ಹಿಂದೆ ಇಲ್ಲಿ ಉತ್ಸವಾದಿಗಳು ನಡೆಯುತ್ತಿದ್ದವು ಎಂದು ತಿಳಿದುಬರುತ್ತದೆ. ದೇವಾಲಯಕ್ಕೆ ದಕ್ಷಿಣ ಮತ್ತು ಪಶ್ಚಿಮ ಕಡೆಯಿಂದ ಎರಡು ಮಾರ್ಗಗಳಿವೆ.
ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ಹತ್ತು ದಿನಗಳ ಕಾಲ ದಸರಾ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ, ಕಾರ್ತೀಕ ಮಾಸದಲ್ಲಿ ಕಾರ್ತೀಕೋತ್ಸವ ನಡೆಯುತ್ತವೆ.

ಒಂದು ಸಾವಿರ ವರ್ಷದ ಇತಿಹಾಸವಿರುವ ಈ ದೇವಾಲಯ ಹಿಂದೆ ರಾಜಾಶ್ರಯದಲ್ಲಿದ್ದಾಗ ವಿಜೃಂಭಣೆಯಿಂದ ಮೆರೆದಿತ್ತು. ಉತ್ಸವಾದಿಗಳಿಗೆ ಸಾಕಷ್ಟು ಜಮೀನು ಇತ್ತು. ಆದರೆ ಕಾಲಕ್ರಮೇಣ ಅದು ಬೇರೆಯವರ ಪಾಲಾಗಿದೆ. ಪ್ರತಿ ವರ್ಷಕ್ಕೊಮ್ಮೆ ಮುಜರಾಯಿ ಇಲಾಖೆ ನೀಡುವ ಅರ್ಚಕರ ಗೌರವಧನ ಬಿಟ್ಟರೆ ಬೇರೆ ಯಾವ ಅನುದಾನವೂ ಈ ದೇಗುಲಕ್ಕೆ ಇಲ್ಲ. ಅರ್ಚಕರಾದ ಬಿ. ನಾಗರಾಜ ಭಟ್ಟರು ಇತ್ತೀಚೆಗೆ ದಾನಿಗಳ ನೆರವಿನಿಂದ ದೇಗುಲವನ್ನು ಸ್ವಲ್ಪಮಟ್ಟಿಗೆ ಜೀರ್ಣೋದ್ಧಾರ ಮಾಡಿಸಿದ್ದಾರೆ.

`ಎಷ್ಟೇ ಕಷ್ಟ ಬಂದರೂ ಒಂದು ದಿನವೂ ಬಿಡದೇ ಈವರೆಗೆ ಎಲ್ಲಾ ಪೂಜಾ ಕೈಂಕರ್ಯಗಳನ್ನೂ ನಡೆಸಿಕೊಂಡು ಹೋಗುತ್ತಿದ್ದೇವೆ. ಸರ್ಕಾರ ಈ ದೇಗುಲದ ಕಡೆಗೆ ಗಮನಹರಿಸಿ ಬಿದ್ದು ಹೋಗಿರುವ ಅದರ ಕಾಂಪೌಂಡ್ ಹಾಗೂ ಶಿಥಿಲವಾಗಿರುವ ಅಶ್ವತ್ಥಕಟ್ಟೆ ಮತ್ತು ದೇಗುಲದ ಸುಕನಾಸಿ ಮತ್ತು ಗರ್ಭಗುಡಿಯ ನೆಲಗಟ್ಟನ್ನು ದುರಸ್ತಿ ಮಾಡುವ ಕಾರ್ಯ ಕೈಗೊಂಡರೆ ದೇಗುಲ ಇನ್ನೂ ಉತ್ತಮಗೊಳ್ಳುತ್ತದೆ~ ಎನ್ನುತ್ತಾರೆ ಇನ್ನೊಬ್ಬ ಅರ್ಚಕ ಬಿ. ಕೃಷ್ಣಭಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.