ADVERTISEMENT

ಈದ್ ಮೆರವಣಿಗೆ: ಮಾರ್ಗ ಬದಲಿಗೆ ನಕಾರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 7:10 IST
Last Updated 10 ಫೆಬ್ರುವರಿ 2011, 7:10 IST

ದಾವಣಗೆರೆ: ನಗರದಲ್ಲಿ ಫೆ. 16ರಂದು ನಡೆಯುವ ಈದ್-ಮಿಲಾದ್ ಮೆರವಣಿಗೆಯ ಮಾರ್ಗ ಬದಲಾವಣೆ ಕೋರಿದ ಮುಸ್ಲಿಂ ಸಮುದಾಯದ ಮುಖಂಡರ ಮನವಿಯನ್ನು ತಳ್ಳಿ ಹಾಕಿದ ಜಿಲ್ಲಾಡಳಿತ, ಹಿಂದನ ವರ್ಷ ಸೂಚಿಸಿದ ಮಾರ್ಗದಲ್ಲಿಯೇ ಮೆರವಣಿಗೆ ನಡೆಸಲು ಅನುಮತಿ ನೀಡಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಮುಸ್ಲಿಂ ಸಮುದಾಯದ ಹಲವು ಮುಖಂಡರು, ಹಳೇ ದಾವಣಗೆರೆಯಿಂದ ಪಿ.ಬಿ. ರಸ್ತೆಗೆ ಮೆರವಣಿಗೆ ಸಾಗುವಾಗ ಪಾಲಿಕೆ ಎದುರಿನ ರೈಲ್ವೆ ಕೆಳಸೇತುವೆ ಬಳಿ ಸ್ತಬ್ಧ ಚಿತ್ರಗಳು ಸಾಗಲು ತೊಂದರೆಯಾಗುತ್ತದೆ. ಹಿಂದೆ ಇದೇ ಮಾರ್ಗದಲ್ಲಿ ಸಾಗುವಾಗ ಹಲವು ಸ್ತಬ್ಧ ಚಿತ್ರಗಳು ಮುರಿದಿದ್ದವು. ಹಾಗಾಗಿ, ಅರುಣಾ ಚಿತ್ರಮಂದಿರದ ಮುಂದಿನ ದಾರಿಯ ಮೂಲಕ ಸಾಗಲು ಅನುಮತಿ ನೀಡಬೇಕು ಎಂದು ಕೋರಿದರು.

ಮಾರ್ಗ ಬದಲಾವಣೆ ಮಾಡಿದರೆ ಸಮಯ ಹೆಚ್ಚು ವ್ಯಯವಾಗುತ್ತದೆ. ಸೂಕ್ತ ಬಂದೋಬಸ್ತ್‌ಗೆ ಅಡ್ಡಿಯಾಗುತ್ತದೆ. ಅಲ್ಲದೇ, ಮಾರ್ಗ ಬದಲಾವಣೆ ಮಾಡದಂತೆ ಕೋರ್ಟ್ ಆದೇಶವೂ ಇದೆ. ಹಳೇ ಮಾರ್ಗದಲ್ಲಿಯೇ ಮೆರವಣಿಗೆ ನಡೆಸಿ ಎಂದು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಸ್. ವೆಂಕಟೇಶ್ ಪ್ರತಿಕ್ರಿಯಿಸಿದರು.

ಹೊಸ ಮಾರ್ಗವೇ ಬೇಕು ಎಂದು ಮುಖಂಡರು ಪಟ್ಟು ಹಿಡಿದ ನಂತರ ಅಧಿಕಾರಿಗಳನ್ನು ಕಳುಹಿಸಿ, ಸ್ಥಳ ಪರಿಶೀಲನೆ ನಡೆಸುತ್ತೇವೆ. ನಂತರ ನಿರ್ಧಾರ ಪ್ರಕಟಿಸುತ್ತೇವೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

 ಮುಸ್ಲಿಂ ಸಮಾಜದ ಮುಖಂಡ ಸೈಯದ್ ಸೈಫುಲ್ಲಾ ಮಾತನಾಡಿ, ಈ ಬಾರಿ ಅತ್ಯಂತ ಶಿಸ್ತುಬದ್ಧವಾಗಿ, ಶಾಂತಿಯಿಂದ ಈದ್-ಮಿಲಾದ್ ಆಚರಣೆ ಮಾಡುತ್ತೇವೆ. ಮೆರವಣಿಗೆಯಲ್ಲಿ ಕುಣಿತ, ಧ್ವನಿವರ್ಧಕ ಬಳಸದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.ಅನಿಸ್‌ಬಾಷ ಮಾತನಾಡಿ, ಹಿಂದು ಮುಖಂಡರು ಹಾಗೂ ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಹಿಂದು ಸಮಾಜದ ಮುಖಂಡ ಕೆ.ಬಿ. ಶಂಕರನಾರಾಯಣ ಮಾತನಾಡಿ, ಹಿಂದುಗಳ ಹಬ್ಬಕ್ಕೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಮುಸ್ಲಿಂ ಸಮಾಜ ಹೆಚ್ಚಿನ ಸಹಕಾರ ನೀಡುತ್ತಾ ಬಂದಿದೆ. ನಾವೆಲ್ಲರೂ ಸೇರಿ ಸಹಕಾರದಿಂದ, ಶಾಂತಿಯುತವಾಗಿ ಈದ್ ಆಚರಿಸೋಣ ಎಂದರು.ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಹಬ್ಬ ಆಚರಿಸಿ. ಜಿಲ್ಲೆಯಲ್ಲಿ ಶಾಂತಿ ನೆಲೆಸಿದರೆ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾಡಳಿತ ಮನವಿ ಮಾಡಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಸ್. ವಿಜಯಕುಮಾರ್, ಹೆಚ್ಚುವರಿ ಎಸ್‌ಪಿ ಕುಮಾರ ಎಸ್. ಕರನಿಂಗ್, ಉಪ ವಿಭಾಗಾಧಿಕಾರಿ ಕೆ.ಎಂ. ಜಾನಕಿ, ಅಮಾನುಲ್ಲಾ ಖಾನ್, ಅಜ್ರತ್ ಅಲಿ, ಖಾಸಿಂ, ಬಿ.ಎಸ್. ವೀರಭದ್ರಪ್ಪ, ವೈ. ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.