ADVERTISEMENT

ಉದ್ಘಾಟನೆ ಭಾಗ್ಯ ಕಾಣದ ಸ್ತ್ರೀಶಕ್ತಿಭವನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 10:45 IST
Last Updated 8 ಜನವರಿ 2011, 10:45 IST

ಚನ್ನಗಿರಿ: ಪಟ್ಟಣದ ಸಂತೆ ಮೈದಾನದ ಸಮೀಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸ್ತ್ರೀಶಕ್ತಿ ಭವನ ನಿರ್ಮಾಣಗೊಂಡು ಆರು ತಿಂಗಳು ಕಳೆದರೂ ಇನ್ನೂ ಉದ್ಘಾಟನೆಯ ಭಾಗ್ಯವನ್ನು ಕಾಣದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ತಾಲ್ಲೂಕಿನ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಒಂದೆಡೆ ಸೇರಿ, ಸಭೆ-ಸಮಾರಂಭ ಮಾಡಲು ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಈ ಭವನ ನಿರ್ಮಿಸಲಾಗಿದೆ. ಕಳೆದ ವರ್ಷ ರಾಜ್ಯ ವಲಯದಿಂದ ರೂ 15 ಲಕ್ಷ ಹಾಗೂ ಇಲಾಖೆ ವತಿಯಿಂದ ರೂ 3 ಲಕ್ಷ ಸೇರಿ ಒಟ್ಟು ರೂ 18 ಲಕ್ಷ ಅನುದಾನ ಮಂಜೂರಾಗಿತ್ತು. ಇದರ ಹಿಂದೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪ್ರಯತ್ನವಿತ್ತು.

ನಿರ್ಮಾಣದ ಗುತ್ತಿಗೆಯನ್ನು ಭೂಸೇನಾ ನಿಗಮ ಪಡೆದುಕೊಂಡಿತ್ತು. ಈ ಭವನ ಈಗ ಅನೈತಿಕ ಚಟಿುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ರಾತ್ರಿಯಾಯಿತೆಂದರೆ ಸಾಕು ಇಲ್ಲಿ ಪುಂಡ, ಪೋಕರಿಗಳು ಜೂಜಾಟವಾಡುತ್ತಾರೆ. ಸರಿರಾತ್ರಿಯ ವೇಳೆ ಇನ್ನೂ ಹಲವಾರು ಅಸಹ್ಯಕರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಈ ಭವನದ ಕಿಟಕಿಯ ಗಾಜುಗಳನ್ನು ಕಿಡಿಗೇಡಿಗಳು ಪುಡಿ ಮಾಡಿ ಹಾಕಿದ್ದಾರೆ.

ಭವನದ ಮುಂದೆ ಅಡಿಕೆ ಸುಲಿಯುತ್ತಾ, ಗೋಡೆಗಳಿಗೆ ಅಡಿಕೆ ಮೂಟೆಗಳನ್ನು ಪೇರಿಸಿರುವುದರಿಂದ ಗೋಡೆಗಳೆಲ್ಲಾ ಅಡಿಕೆ ಬಣ್ಣಕ್ಕೆ ತಿರುಗಿವೆ. ಆದ್ದರಿಂದ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ನಿರ್ಮಿಸಿರುವ ಸ್ತ್ರೀಶಕ್ತಿ ಭವನವನ್ನು ಆದಷ್ಟು ಬೇಗ ಉದ್ಘಾಟಿಸಿ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕೆಂದು ಕರಿಯಪ್ಪ, ರಂಗಸ್ವಾಮಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.