ADVERTISEMENT

ಉದ್ಯೋಗ ಖಾತ್ರಿ ಅವ್ಯವಹಾರ: ಕಾಂಗ್ರೆಸ್ ಧರಣಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 6:00 IST
Last Updated 3 ಫೆಬ್ರುವರಿ 2011, 6:00 IST

ಹೊನ್ನಾಳಿ: ಉದ್ಯೋಗ ಖಾತ್ರಿ ಯೋಜನೆಯ ಲಕ್ಷಾಂತರ ರೂ  ಹಣವನ್ನು ದುರುಪಯೋಗಪಡಿಸಿಕೊಂಡಿರುವ ಅರಕೆರೆ ಗ್ರಾ.ಪಂ. ಕಾರ್ಯದರ್ಶಿ ರಾಜೇಂದ್ರಪ್ರಸಾದ್ ಅವರನ್ನು ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಕಾಂಗ್ರೆಸ್ ವತಿಯಿಂದ ತಾ.ಪಂ. ಕಚೇರಿ ಎದುರು ಬುಧವಾರ ಧರಣಿ ನಡೆಸಲಾಯಿತು.

ಖಾತ್ರಿ ಯೋಜನೆಯ ಕಾಯ್ದೆಗಳನ್ನು ಗಾಳಿಗೆ ತೂರಿ ಬಿಲ್ ಕಲೆಕ್ಟರ್ ವೆಂಕಟೇಶ್ ಎಂಬುವವರ ಹೆಸರಿನಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕಿನಿಂದ ಲಕ್ಷಾಂತರ ಹಣ ಪಡೆಯಲಾಗಿದೆ, ಶೇ. 25ರಷ್ಟು ಲಂಚ ಪಡೆಯಲಾಗಿದೆ, ಫಲಾನುಭವಿಗಳಿಗೆ ಚೆಕ್ ಮೂಲಕ ಹಣ ಪಾವತಿಸಿಲ್ಲ. ಗ್ರಾ.ಪಂ. ಸದಸ್ಯರೊಂದಿಗೆ ಕಾರ್ಯದರ್ಶಿ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಪಕ್ಷದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಹೊನ್ನಾಳಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಅವ್ಯವಹಾರ ನಡೆದಿದೆ, ಜಿ.ಪಂ. ದಕ್ಷ ಅಧಿಕಾರಿಗಳನ್ನು ನೇಮಿಸಿ ತನಿಖೆ ನಡೆಸಬೇಕು. ಗ್ರಾಮೀಣ ಕೂಲಿ ಕಾರ್ಮಿಕರು, ರೈತರ ಹಿತ ಕಾಪಾಡಬೇಕು ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಒತ್ತಾಯಿಸಿದರು.

ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಮೇಲಿನ 9 ಗ್ರಾ.ಪಂ. ವ್ಯಾಪ್ತಿಯ ರಸ್ತೆ ನಿರ್ಮಾಣದಲ್ಲೂ ಅವ್ಯವಹಾರ ನಡೆದಿದ್ದು, ಕಳಪೆ ಕಾಮಗಾರಿ ನಡೆಸಿ, ಲಕ್ಷಾಂತರ ರೂಪಾಯಿ ಬಿಲ್ ಪಡೆದಿದ್ದಾರೆ, ತಕ್ಷಣ ಇದನ್ನು ತಡೆದು ಅಂತರ ಜಿಲ್ಲಾ ಅಧಿಕಾರಿಗಳಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಕೆ.ವಿ ಚನ್ನಪ್ಪ, ಟೈಲರ್ ಬಸಪ್ಪ, ಚಂದ್ರಶೇಖರಪ್ಪ, ಪ್ರೇಮ್‌ಕುಮಾರ್ ಭಂಡಿಗಡಿ, ಎನ್.ಆರ್. ಪರಮೇಶ್ವರಪ್ಪ, ದೊಡ್ಡೇರಿ ವಿಶ್ವನಾಥ್, ಭಾರತಿ ಚಂದ್ರಶೇಖರ್, ಸುಧಾ ರಾಜಪ್ಪ, ರಾಜೇಶ್ವರಿ ರಂಗನಾಥ್, ಇಂದ್ರಮ್ಮ, ಸವಿತ, ಹಾಲಮ್ಮ ಇತರರು ಪಾಲ್ಗೊಂಡಿದ್ದರು.

ಅಮಾನತು: ತಾಲ್ಲೂಕು ಕಾಂಗ್ರೆಸ್ ಮುಖಂಡರ ಧರಣಿಗೆ ಮಣಿದ ದಾವಣಗೆರೆ ಜಿ.ಪಂ. ಉಪ ಕಾರ್ಯದರ್ಶಿ ಷಡಕ್ಷರಪ್ಪ, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ತಿಮ್ಮಪ್ಪ ಅವ್ಯವಹಾರ ಆರೋಪ ಎದುರಿಸುತ್ತಿರುವ ಅರಕೆರೆ ಗ್ರಾ.ಪಂ. ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಅವರನ್ನು ಅಮಾನತುಗೊಳಿಸಿದರು. ನಂತರ ಕಾಂಗ್ರೆಸ್ ಮುಖಂಡರು ಧರಣಿ ಅಂತ್ಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.