ADVERTISEMENT

ಉಪವಾಸ ಸತ್ಯಾಗ್ರಹ ಹಿಂಪಡೆದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 6:43 IST
Last Updated 19 ಸೆಪ್ಟೆಂಬರ್ 2013, 6:43 IST

ದಾವಣಗೆರೆ: ಹರಪನಹಳ್ಳಿ ತಾಲ್ಲೂಕನ್ನು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸಾ್ಥನಮಾನ ನೀಡುವ ಸಂವಿಧಾನದ 371 ‘ಜೆ’ ಕಲಂನ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಜಿಲ್ಲಾಡಳಿತ ಭವನದ ಬಳಿ ನಡೆಸುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಶಾಸಕ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಭರವಸೆ ಮೇರೆಗೆ ಬುಧವಾರ ಹಿಂಪಡೆದರು.

ಸ್ಥಳಕ್ಕೆ ಶಾಸಕ ಮಲ್ಲಿಕಾರ್ಜುನ್‌ ಭೇಟಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈ ಸಂಬಂಧ ಮಾತುಕತೆ ನಡೆಸಲಾಗುವುದು. ಸಭೆಗೆ ನಿಮ್ಮನ್ನೂ ಆಹ್ವಾನಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ವಾಪಸ್‌ ಪಡೆದರು.

ಅದಕ್ಕೂ ಮೊದಲು ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ್‌ ಕುಮಾರ್‌ ಭೇಟಿ ನೀಡಿ ಸ್ವಾಮೀಜಿಯ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ, ಸ್ವಾಮೀಜಿ ಅದಕ್ಕೆ ಒಪ್ಪಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೇ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟುಹಿಡಿದರು. 
ಚಿಕಿತ್ಸೆ: ಉಪವಾಸ ಸತ್ಯಾಗ್ರಹದಿಂದ ಬಳಲಿದಂತೆ ಕಂಡುಬಂದ ಸ್ವಾಮೀಜಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ಕೊಡಿಸಲಾಯಿತು.

ಶಾಸಕ ರವೀಂದ್ರ ಮನವಿ
ಹರಪನಹಳ್ಳಿ: ಚನ್ನಬಸವ ಶಿವಯೋಗಿ ಸ್ವಾಮೀಜಿ ಅವರಿಗೆ ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ಶಾಸಕ ಎಂ.ಪಿ.ರವೀಂದ್ರ ಕೂಡ
ಮನವಿ ಮಾಡಿದ್ದರು. ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದ್ದು, ಸಂಸದೀಯ ಚೌಕಟ್ಟಿನಲ್ಲಿ ಸರ್ವ ಪ್ರಯತ್ನ ನಡೆಸುತ್ತಿದ್ದೇನೆ. ಅದಕ್ಕೆ ಪೂರಕವಾಗಿ ಸಚಿವ ಎಚ್‌.ಕೆ. ಪಾಟೀಲ್ ನೇತೃತ್ವದ ಸಂಪುಟ ಉಪಸಮಿತಿಯ ಮುಂದೆಯೂ ತಾಲ್ಲೂಕಿನ ಜನರ ಒಕ್ಕೊರಲಿನ ಬೇಡಿಕೆ ಮಂಡಿಸಲಾಗಿದೆ.

ಸಮಿತಿಯೂ ಸಹ, ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿರುವ ಧಾರ್ಮಿಕ ಗುರುಗಳ ಮಾರ್ಗದರ್ಶನ ಅತ್ಯವಶ್ಯಕ ಆಗಿರುವುದರಿಂದ, ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ನಿರಶನ ಅಂತ್ಯಗೊಳಿಸುವಂತೆ ಹರಪನಹಳ್ಳಿಯಲ್ಲಿ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ರವೀಂದ್ರ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT