ADVERTISEMENT

ಎಂಪಿ ನಿಧಿ ದುರ್ಬಳಕೆ ಆರೋಪ: ಮಹತ್ವದ ತಿರುವು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 6:55 IST
Last Updated 11 ಫೆಬ್ರುವರಿ 2011, 6:55 IST

ದಾವಣಗೆರೆ: ನಗರದಲ್ಲಿ ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲು ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಅವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪದ ಪ್ರಕರಣ ಮಹತ್ವದ ತಿರುವುಗಳನ್ನು ಪಡೆಯುತ್ತಿದೆ.

ನಿಧಿ ದುರುಪಯೋಗ ಆರೋಪದ ವಿಚಾರಣೆ ನಡೆಸಲು ಕಳೆದ ವರ್ಷ ಇಲ್ಲಿಗೆ ಆಗಮಿಸಿದ್ದ ತಂಡದ ಸದಸ್ಯರೂ ಆಗಿರುವ, ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ ಉಪ ಕಾರ್ಯದರ್ಶಿ ಧರ್ಮಪಾಲ್ ಅವರು ಲೋಕಸಭಾ ಸಚಿವಾಲಯಕ್ಕೆ 2010ರ ಜುಲೈ 19ರಂದು ಬರೆದಿರುವ ಪತ್ರ ಈಗ ಚರ್ಚೆಗೆ ಗ್ರಾಸವಾಗಿದೆ.

ಕೇಂದ್ರದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವತಿಯಿಂದ ರಚಿಸಲಾದ ಅಧಿಕಾರಿಗಳ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಈ ವಿಷಯವಾಗಿ ವಿಚಾರಣೆ ನಡೆಸಿದ್ದು, ಅದರ ಪ್ರಕಾರ ಜಿಲ್ಲಾಡಳಿತವು ಕಾಮಗಾರಿ ಅನುಷ್ಠಾನದ ಕ್ರಮದಲ್ಲಿ ಲೋಪ ಎಸಗಿರುವುದು ಕಂಡುಬಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅದೇ ರೀತಿ, ಈ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಲಾಗಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಧರ್ಮಪಾಲ್ ಅವರು 2010ರ ಸೆ. 27ರಂದು ಲೋಕಸಭಾ ಸಚಿವಾಲಯಕ್ಕೆ ಬರೆದಿರುವ ಮತ್ತೊಂದು ಪತ್ರದಲ್ಲಿ, ಜಿ.ಎಂ. ಸಿದ್ದೇಶ್ವರ ಅವರು ಶ್ರೀಶೈಲ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿ ಹಾಗೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ನಗರಸಭೆ ಮಾಜಿ ಅಧ್ಯಕ್ಷ ಎಂ.ಜಿ. ತಿಪ್ಪೇಸ್ವಾಮಿ ಅವರು ನೀಡಿದ ದೂರನ್ನು ಆಧರಿಸಿ ಈ ಪತ್ರ ಬರೆಯಲಾಗಿದೆ.

ತಮಗೆ ಒದಗಿಸಲಾದ ದಾಖಲೆಗಳನ್ನು ಗಮನಿಸಿದರೆ, ಜಿಎಂಐಟಿಗೆ ಬಸ್ ಶೆಲ್ಟರ್ ಕಾಮಗಾರಿಗಳನ್ನು ವಹಿಸಿದ ಸಂದರ್ಭದಲ್ಲಿ ಸಿದ್ದೇಶ್ವರ ಅವರು ಟ್ರಸ್ಟ್‌ನ ವ್ಯವಹಾರಗಳಲ್ಲಿ ಸಕ್ರಿಯವಾಗಿದ್ದರು ಎಂದು ಕಂಡುಬರುತ್ತದೆ ಎಂದೂ ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಂಸದರ ಪ್ರದೇಶಾಭಿವೃದ್ಧಿ ಯೋಜನಾ ಸಮಿತಿಯ ಅಧಿಕಾರಿ ಟಿ.ಆರ್. ನಾರಿಯಲ್ ಅವರು 2010ರ ಆ. 2ರಂದು ಎಂ.ಜಿ. ತಿಪ್ಪೇಸ್ವಾಮಿ ಅವರಿಗೆ ಬರೆದಿರುವ ಪತ್ರದಲ್ಲಿ, ಸಂಸದರ ಅನರ್ಹತೆಯ ಬೇಡಿಕೆಯ ಕುರಿತು ಪ್ರಸ್ತಾಪಿಸಲಾಗಿದೆ. ‘ಅನರ್ಹತೆ ಕುರಿತು ಕ್ರಮ ಕೈಗೊಳ್ಳುವುದಕ್ಕಾಗಿ ಲೋಕಸಭಾ ಸಚಿವಾಲಯ ಹಕ್ಕುಬಾಧ್ಯತಾ ಸಮಿತಿಗೆ ಪ್ರಕರಣದ ವಿಚಾರಣಾ ವರದಿ ಮತ್ತು ತಿಪ್ಪೇಸ್ವಾಮಿ ಅವರ ದೂರಿನ ಪ್ರತಿಯನ್ನು ಕಳುಹಿಸಲಾಗಿದೆ’ ಎಂದು ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಎಂ.ಜಿ. ತಿಪ್ಪೇಸ್ವಾಮಿ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬಂದಿದ್ದರೂ ಇದುವರೆಗೂ ಆ ಬಗ್ಗೆ ಯಾವುದೇ ಕ್ರಮ ಆಗಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ನಿರಾಕರಣೆ: ಈ ಕುರಿತು ‘ಪ್ರಜಾವಾಣಿ’ಯು ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ಸಂಪರ್ಕಿಸಿದಾಗ, ಈ ಎಲ್ಲ ಆರೋಪಗಳು ಮತ್ತು ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.ಈ ಕುರಿತು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಅವರನ್ನು ಸಂಪರ್ಕಿಸಿದಾಗ, ಜಿಲ್ಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದ ತಂಡವು ನೀಡಿದ ವರದಿ ಆಧರಿಸಿ ಮುಖ್ಯ ಕಾರ್ಯದರ್ಶಿಗೆ ಬಂದಿರುವ ಪತ್ರದ ಪ್ರತಿ ಮಾತ್ರ ತಮಗೆ ತಲುಪಿದೆ, ಕಾಮಗಾರಿ ಅನುಷ್ಠಾನ ಕ್ರಮದಲ್ಲಿ ಲೋಪ ಆಗಿರುವ ಬಗ್ಗೆ ಅದರಲ್ಲಿ ಪ್ರಸ್ತಾಪಿಸಲಾಗಿದೆ. ಶಿಸ್ತು ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.