ADVERTISEMENT

ಎಕರೆಗೆ ರೂ25 ಸಾವಿರ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 6:50 IST
Last Updated 27 ಸೆಪ್ಟೆಂಬರ್ 2011, 6:50 IST

ಜಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದಿಂದ ಒಣಗಿದ ಮೆಕ್ಕೆಜೋಳದ ಹೊರೆಯನ್ನು ಹಿಡಿದು ಮೆರವಣಿಗೆಯ ಮೂಲಕ ಮಿನಿವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಡಿ.ಎಂ. ಮಲಿಯಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಮುಂಗಾರು ಮಳೆ ವಿಫಲವಾಗಿ ಬೆಳೆಗಳೆಲ್ಲಾ ಒಣಗಿದ್ದು, ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕೂಡಲೇ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ನಷ್ಟಗೊಂಡ ರೈತರಿಗೆ ಪ್ರತಿ ಎಕರೆಗೆ ್ಙ 15 ಸಾವಿರದಿಂದ ್ಙ 25 ಸಾವಿರ ರೂವರೆಗೆ ಪರಿಹಾರ ನೀಡಬೇಕು.

ರೈತರ ಬ್ಯಾಂಕ್ ಸಾಲವನ್ನು ಮನ್ನಾ ಮಾಡಬೇಕು. ಪಂಚಾಯ್ತಿವಾರು ಗೋಶಾಲೆ ತೆರೆಯಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಖಾಸಗೀಕರಣ ನೀತಿ ನಿಲ್ಲಬೇಕು. ರೈತರ ಭೂಮಿಯನ್ನು ವಿದೇಶಿ ಕಂಪೆನಿಗಳಿಗೆ ನೀಡಬಾರದು. ಅಕ್ರಮ ಗಣಿಗಾರಿಕೆಯಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ರೂ ಹಣವನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರೈತರ ಹಿತವನ್ನು ಕಡೆಗಣಿಸಿದೆ ಎಂದು ಅವರು ಆರೋಪಿಸಿದರು.

ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಎಚ್. ವೆಂಕಟೇಶ್ ಮಾತನಾಡಿ, ತಾಲ್ಲೂಕಿನ ರೈತರ ಹಿತದೃಷ್ಟಿಯಿಂದ ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಕಾರ್ಮಿಕರಿಗೆ ಕೂಲಿ ಸಿಗುತ್ತಿಲ್ಲ. ಕಾಮಗಾರಿಗಳು ಗುತ್ತಿಗೆದಾರರ ಪಾಲಾಗುತ್ತಿವೆ ಎಂದು ಆರೋಪಿಸಿದರು.

ಕೆಪಿಆರ್‌ಎಸ್ ಮುಖಂಡರಾದ ಆರ್. ಓಬಳೇಶ್, ಇ. ಶ್ರೀನಿವಾಸ್, ಜಿ.ಎಚ್. ಶಂಭುಲಿಂಗಪ್ಪ, ನಾಗಲಿಂಗಪ್ಪ, ಆರ್.ಜಿ. ಸತೀಶ್, ಬೋಸಪ್ಪ, ಕುಬೇರಪ್ಪ, ವಿಠಲಶೆಟ್ಟಿ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT