ADVERTISEMENT

‘ಎಲ್ಲಾ ಪಕ್ಷಗಳ ನಾಯಕರಲ್ಲೂ ಗೊಂದಲ’

ಜೆಡಿಯು ಸದಸ್ಯತ್ವ ಅಭಿಯಾನ ಕಾರ್ಯಕ್ರದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 9:21 IST
Last Updated 2 ಏಪ್ರಿಲ್ 2018, 9:21 IST

ಚನ್ನಗಿರಿ: ದ್ವೇಷ ರಾಜಕಾರಣ ಇರಬಾರದು. ಆದರೆ, ಎಲ್ಲಾ ಪಕ್ಷಗಳ ನಾಯಕರ ಮನಸ್ಸುಗಳಲ್ಲಿ ಗೊಂದಲವನ್ನು ಕಾಣುತ್ತಿದ್ದೇವೆ. ಬಹಳಷ್ಟು ನಾಯಕರು ಬೇರೆ ಪಕ್ಷಗಳಿಗೆ ಹೋಗಲು ಮನಸ್ಸು ಇಲ್ಲದೇ ಅಲ್ಲಿಯೇ ಹಿಂಸೆಯನ್ನು ಅನುಭವಿಸುತ್ತಿದ್ದಾರೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ತಿಳಿಸಿದರು.ಪಟ್ಟಣದ ರಾಮ ಮನೋಹರ ಲೋಹಿಯಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಜೆಡಿಯು ಸೇರ್ಪಡೆ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಜೆಡಿಯು ಅನ್ನು ಕಡೆಗಣಿಸಲು ಆಗುವುದಿಲ್ಲ. ರಾಜ್ಯದಲ್ಲಿ ಈ ಹಿಂದೆ ರಾಮಕೃಷ್ಣ ಹೆಗಡೆ ಹಾಗೂ ಜೆ.ಎಚ್. ಪಟೇಲ್‌ ಅವರು ಉತ್ತಮ ಆಡಳಿತವನ್ನು ನೀಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದರು. ನಮ್ಮ ಪಕ್ಷ ಯಾರನ್ನೂ ನಿರ್ಲಕ್ಷ್ಯ ಮಾಡುವುದಿಲ್ಲ. ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಪಕ್ಷ ಮುಂದೆ ಸಾಗುತ್ತಿದೆ. ನದಿ ಹುಟ್ಟುವಾಗ ಸಣ್ಣದಾಗಿ ಹರಿಯುತ್ತದೆ. ಮುಂದೆ ಸಾಗಿದಂತೆ ದೊಡ್ಡದಾಗಿ ಭೋರ್ಗರೆಯುತ್ತದೆ. ಈ ರೀತಿ ನಮ್ಮ ಪಕ್ಷವೂ ಮುಂದೆ ದೊಡ್ಡದಾಗಲಿದೆ. ನಾವು ಯಾರ ಮೇಲೂ ಒತ್ತಡ ಹಾಕಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಬದಲಾವಣೆ ಬಯಸಿ ಯಾರೇ ಪಕ್ಷಕ್ಕೆ ಬಂದರೂ ಸೇರ್ಪಡೆ ಮಾಡಿಕೊಳ್ಳುತ್ತೇವೆ’ ಎಂದರು.

‘ಜೆಡಿಯು ರಾಜ್ಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಚುನಾವಣೆಯಲ್ಲಿ ಗೆಲುವಿನ ಕಡೆಗೆ ಸಾಗಲು ಹೊಸದಾದ ಯೋಜನೆಯನ್ನು ರೂಪಿಸಿಕೊಂಡಿದ್ದೇವೆ. ಉತ್ತಮ ನಾಯಕರ ಕೊರತೆಯಿಂದ ಹಲವು ಮುಖಂಡರು ಪಕ್ಷ ತೊರೆದು ಹೋಗಿದ್ದರು. ಮುಂದಿನ ದಿನಗಳಲ್ಲಿ ಮತ್ತೆ ಆ ನಾಯಕರು ಪಕ್ಷವನ್ನು ಸೇರಲಿದ್ದಾರೆ. ಮತದಾರರು ಎಲ್ಲಿಯೂ ಬದಲಾಗಿಲ್ಲ. ಮುಂದಿನ ದಿನಗಳಲ್ಲಿ ಜೆಡಿಯು ಪ್ರಬುದ್ಧವಾಗಿ ಬೆಳೆದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಕೋರಿ ಅವರು ಜೆಡಿಎಸ್‌ ತೊರೆದು ಜೆಡಿಯು ಪಕ್ಷಕ್ಕೆ ಸೇರಿದರು.

ADVERTISEMENT

ಜೆಡಿಯು ವಕ್ತಾರ ಟಿ.ಆರ್. ಭೋಜರಾಜ್, ಜಿಲ್ಲಾ ಸಂಚಾಲಕ ಉಸ್ಮಾನ್ ಶರೀಫ್, ತಾಲ್ಲೂಕು ಸಂಚಾಲಕ ಬುಳುಸಾಗರದ ನಾಗರಾಜಪ್ಪ, ಮಂಜುನಾಥ್, ಸುರೇಶ್ ಕೋಟೋಜಿ ರಾವ್, ಜ್ಯೋತಿ ಪ್ರಸಾದ್, ನಯಾಜ್ ಉಪಸ್ಥಿತರಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಎಂ. ರವಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.