ADVERTISEMENT

ಎಲ್ಲ ಜಿಲ್ಲೆಗಳಲ್ಲಿ ಕಬ್ಬನ್‌ಪಾರ್ಕ್ ಮಾದರಿ ಉದ್ಯಾನ: ರವೀಂದ್ರನಾಥ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 5:05 IST
Last Updated 18 ಅಕ್ಟೋಬರ್ 2011, 5:05 IST

ದಾವಣಗೆರೆ: ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಬೆಂಗಳೂರಿನ ಕಬ್ಬನ್‌ಪಾರ್ಕ್, ಲಾಲ್‌ಬಾಗ್ ಮಾದರಿ ಉದ್ಯಾನ ನಿರ್ಮಿಸಲಾಗುವುದು ಎಂದು ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ್ ತಿಳಿಸಿದರು.

ನಗರದಲ್ಲಿ ಸೋಮವಾರ ಆಯೋಜಿಸಿದ್ದ `ಪ್ರಗತಿಯತ್ತ ತೋಟಗಾರಿಕೆ~ ಕಾರ್ಯಾಗಾರ ಉದ್ಘಾಟನೆಗೆ ಮುನ್ನ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕನಸು ಇದಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಬೆಂಗಳೂರಿನವರು ಮಾತ್ರವಲ್ಲದೆ ಇತರ ನಗರಗಳ ಜನರು ಸಹ ಸ್ವಚ್ಛ ಗಾಳಿ, ಪರಿಸರ ಅನುಭವಿಸಲು ಅನುಕೂಲ ಮಾಡಿಕೊಡಲಾಗುವುದು. ಇಲಾಖೆ ಕಾರ್ಯಕ್ರಮಗಳ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದರು.

ಸರ್ಕಾರದ ಫಾರ್ಮ್‌ಗಳನ್ನು ಖಾಸಗಿ ಕಂಪೆನಿಗಳಿಗೆ ನೀಡುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ 413ಕ್ಕೂ ಹೆಚ್ಚು (15,672 ಎಕರೆ) ಫಾರ್ಮ್‌ಗಳಿವೆ. ಇವುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಖಾಸಗಿ ಕಂಪೆನಿಗಳಿಗೆ ನೀಡಲು ಉದ್ದೇಶಿಸಲಾಗಿತ್ತು. ಇದನ್ನು ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೈಗೊಳ್ಳಲಾಗಿತ್ತು.
 
ಆದರೆ, ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಗುತ್ತಿಗೆ ಪಡೆಯಲು ಯಾರೂ ಮುಂದೆ ಬರಲಿಲ್ಲ. ಹೀಗಾಗಿ, ಪ್ರಸ್ತಾವ ಕೈ ಬಿಡಲಾಗಿದೆ. ಫಾರ್ಮ್‌ಗಳ ಅಭಿವೃದ್ಧಿಗೆ ಸರ್ಕಾರವೇ ಹಣ ತೆಗೆದಿರಿಸಿದ್ದು, ಹನಿ ನೀರಾವರಿ ವ್ಯವಸ್ಥೆ ಅಳವಡಿಸಿ ನರ್ಸರಿ ಬೆಳೆಸಲಾಗುವುದು. ಒತ್ತುವರಿ ತೆರವುಗೊಳಿಸಲಾಗುವುದು. ಸುತ್ತಲೂ ಬೇಲಿ ಹಾಕಿ ಸಂರಕ್ಷಿಸಲಾಗುವುದು ಎಂದು ವಿವರಿಸಿದರು.

ವಿದ್ಯುತ್ ಖರೀದಿ: ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗಿದ್ದು, ವಿದ್ಯುತ್ ಖರೀದಿ ಸಂಬಂಧ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆದಿದೆ. ಕಾರ್ಖಾನೆಗಳವರು ಪ್ರತಿ ಯೂನಿಟ್‌ಗೆ ರೂ.6.10 ಪೈಸೆ ಕೇಳುತ್ತಿರುವುದು, ಸಕಾರಾತ್ಮಕ ಬೆಳವಣಿಗೆಯಲ್ಲ. ಬೇರೆ ರಾಜ್ಯಗಳ ಸರ್ಕಾರಗಳು ಯೂನಿಟ್‌ಗೆ ರೂ.4.80 ಪೈಸೆಯಂತೆ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿಸುತ್ತಿವೆ. ಇದೇ ಬೆಲೆಗೆ ನಾವೂ ಸಹ ಕೇಳಿದ್ದೇವೆ. ಮತ್ತೊಮ್ಮೆ ಸಭೆ ನಡೆಸಿ ಅವರಿಗೆ ಮನವರಿಕೆ ಮಾಡಿಕೊಡ ಲಾಗುವುದು. ಮಳೆಗಾಲದಲ್ಲಿಯೂ ವಿದ್ಯುತ್ ಖರೀದಿಸುವುದಾಗಿ ತಿಳಿಸಲಾಗುವುದು ಎಂದು ಹೇಳಿದರು.

ಸಕ್ಕರೆ ಕಾರ್ಖಾನೆಗಳು ನಿತ್ಯ 250 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿವೆ. ಇಲ್ಲಿಂದ ವಿದ್ಯುತ್ ಖರೀದಿಸಿದರೆ ಸ್ವಲ್ಪ ಸಮಸ್ಯೆ ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದಿನ ಸರ್ಕಾರಗಳು ಇಲಾಖೆಗೆ ರೂ.200-300 ಕೋಟಿಯನ್ನಷ್ಟೆ ಕಲ್ಪಿಸುತ್ತಿದ್ದವು. ನಮ್ಮ ಸರ್ಕಾರ ದಾಖಲೆ ಪ್ರಮಾಣದಲ್ಲಿ ರೂ.753 ಕೋಟಿ ನೀಡಿದೆ. ಮುಂದಿನ ವರ್ಷ ಬಜೆಟ್‌ನಲ್ಲಿ ಇಲಾಖೆ ಅನುದಾನ ರೂ.2,000 ಕೋಟಿ ತಲುಪಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.