ADVERTISEMENT

ಎಷ್ಟೇ ಭತ್ತ, ಮೆಕ್ಕೆಜೋಳ ತಂದರೂ ಖರೀದಿ

ವಿಡಿಯೊ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 5:27 IST
Last Updated 3 ಡಿಸೆಂಬರ್ 2013, 5:27 IST

ದಾವಣಗೆರೆ: ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಭತ್ತ ಪ್ರತಿ ಕ್ವಿಂಟಲ್‌ಗೆ ₨ 1,600 ಹಾಗೂ ಮೆಕ್ಕೆಜೋಳಕ್ಕೆ ₨ 1,310 ನಿಗದಿ ಪಡಿಸಲಾಗಿದೆ. ರೈತರು ಎಷ್ಟೇ ಪ್ರಮಾಣದ ಭತ್ತ, ಮೆಕ್ಕೆಜೋಳ ತಂದರೂ ಕೂಡ ಖರೀದಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ್‌ ಕುಮಾರ್‌ ತಿಳಿಸಿದರು.

ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಅವರು ಸೋಮವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜತೆ ನಡೆಸಿದ ವಿಡಿಯೊ ಕಾನ್ಫರೆನ್ಸ್‌ ವೇಳೆ ಈ  ಮಾಹಿತಿ ನೀಡಿದರು.

ರೈತರು ಗುಣಮಟ್ಟದ ಒಣಗಿದ ಮೆಕ್ಕೆಜೋಳ, ಭತ್ತವನ್ನು ಖರೀದಿ ಕೇಂದ್ರಗಳಿಗೆ ತರುವಂತೆ ತಿಳಿಸಲಾಗಿದೆ. ಖರೀದಿಯಾದ ವಾರದೊಳಗೆ ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ನೀಡಲಾಗುವುದು. ಎಪಿಎಂಸಿ ಮಾರಾಟ ಮಳಿಗೆ ತೆರೆಯುವ ವೇಳೆಗೆ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ಎಪಿಎಂಸಿ ಆವರಣದಲ್ಲಿಯೇ ಖರೀದಿ ಕೇಂದ್ರ ಆರಂಭಿಸಲಾಗಿದೆ. ಇದೇ ಕೇಂದ್ರಗಳಲ್ಲಿ ಮುಂದಿನ ದಿನಗಳಲ್ಲಿ ರಾಗಿ ಹಾಗೂ ಬಿಳಿಜೋಳ ಖರೀದಿಸ ಲಾಗುವುದು. ರಾಗಿಗೆ ಕನಿಷ್ಠ ಬೆಂಬಲ ಬೆಲೆ ₨ 1,800, ಬಿಳಿಜೋಳಕ್ಕೆ ₨ 1,800 ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.

ರೈತರು ಭತ್ತ, ಮೆಕ್ಕೆಜೋಳ, ರಾಗಿ ಹಾಗೂ ಬಿಳಿಜೋಳವನ್ನು ನೇರವಾಗಿ ಖರೀದಿ ಕೇಂದ್ರಗಳಿಗೆ ತರಬೇಕು. ಅವರೇ ಮಾರಾಟ ಮಾಡಬೇಕು. ಏಜೆಂಟರ ಬಳಿಗೆ ಹೋಗಬಾರದು. ಖರೀದಿಗೆ ಸಂಬಂಧಿಸಿದ ದೂರು, ಸಮಸ್ಯೆಗಳಿದ್ದಲ್ಲಿ ತಹಶೀಲ್ದಾರ್‌ ಅಥವಾ ಉಪ ವಿಭಾಗಾಧಿಕಾರಿ, ಆಹಾರ ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆಯ ಉಪಯೋಗ ಮಾಡಿಕೊಳ್ಳಬೇಕು ಎಂದು
ತಿಳಿಸಿದರು.

ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಬಿ. ಹೇಮಚಂದ್ರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.