ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಮಿಷನ್ 5

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 5:50 IST
Last Updated 14 ಸೆಪ್ಟೆಂಬರ್ 2011, 5:50 IST

ದಾವಣಗೆರೆ: ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಸೆ. 30ರಂದು ಡಿಡಿಪಿಐ, ಶಿಕ್ಷಕರು ಮತ್ತು ಶಿಕ್ಷಣತಜ್ಞರೊಂದಿಗೆ ಸಭೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ತಿಳಿಸಿದರು.

ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯಮಟ್ಟದಲ್ಲಿ 27ನೇ ಸ್ಥಾನದಿಂದ 14ನೇ ಸ್ಥಾನಕ್ಕೇರಿದೆ. ಇದು ಸಾಧ್ಯವಾಗಿದ್ದು `ಮಿಷನ್-10~ ಯೋಜನೆ ಮೂಲಕ. ಕೇವಲ ಶೇ. 0.7 ನಿಂದ ಮಾತ್ರ 10ನೇ ಸ್ಥಾನಕ್ಕೇರುವುದನ್ನು ಜಿಲ್ಲೆ ತಪ್ಪಿಸಿಕೊಂಡಿತಷ್ಟೇ.

ಕನಿಷ್ಠ 5 ವಿದ್ಯಾರ್ಥಿಗಳು ಪಾಸು ಆಗಿದ್ದರೆ ರಾಜ್ಯದ  ಎಸ್ಸೆಸ್ಸೆಲ್ಸಿ  ಫಲಿತಾಂಶದಲ್ಲಿ  ದಾವಣಗೆರೆ ಜಿಲ್ಲೆ  10ನೇ ಸ್ಥಾನ  ತಲುಪುತ್ತಿತ್ತು.  ಹಾಗಾಗಿ,  ಫಲಿತಾಂಶ  ಸುಧಾರಣೆ ನಿಟ್ಟಿನಲ್ಲಿ ಸಭೆ ನಡೆಸಲಾಗುವುದು ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ `ಮಿಷನ್ 5~ ಹೆಸರಿನಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಯೋಜನೆ ರೂಪಿಸಲಾಗುವುದು. ರಾಜ್ಯದಲ್ಲಿ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉನ್ನತ ಸ್ಥಾನ ಗಳಿಸಿದ ಜಿಲ್ಲೆಗಳ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಂದ ಸೂಕ್ತ ಸಲಹೆಗಳನ್ನು ಪಡೆಯಲಾಗುವುದು.

ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಫಲಿತಾಂಶ ಸುಧಾರಣೆಗೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತುಪೋಷಕರ ಸಹಕಾರ ಬೇಕು ಎಂದು ಶಿವಯೋಗಿಸ್ವಾಮಿ ಹೇಳಿದರು.

ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ನಿವೃತ್ತ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಸಂಬಂಧಿಸಿದ ಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.