ADVERTISEMENT

ಏತನೀರಾವರಿ; ರಾಜ್ಯದ 500 ಕೆರೆಗಳಿಗೆ ನೀರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2011, 4:35 IST
Last Updated 19 ನವೆಂಬರ್ 2011, 4:35 IST
ಏತನೀರಾವರಿ; ರಾಜ್ಯದ 500 ಕೆರೆಗಳಿಗೆ ನೀರು
ಏತನೀರಾವರಿ; ರಾಜ್ಯದ 500 ಕೆರೆಗಳಿಗೆ ನೀರು   

ದಾವಣಗೆರೆ: ಕೃಷ್ಣ, ಕಾವೇರಿ, ತುಂಗಭದ್ರಾ, ಹೇಮಾವತಿ ಜಲಾನಯನ ಪ್ರದೇಶಗಳಿಂದ ಏತನೀರಾವರಿ ಯೋಜನೆ ಮೂಲಕ ರಾಜ್ಯದ 500 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. 54  ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 39 ಸಂಪೂರ್ಣಗೊಂಡಿವೆ. ಉಳಿದ 15 ಪ್ರಗತಿಯ ಹಂತದಲ್ಲಿವೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಮೃತಾಪುರ- ಉಬ್ರಾಣಿ ಏತನೀರಾವರಿ ಯೋಜನೆ ಅಡಿ ಪ್ರಾಯೋಗಿಕವಾಗಿ ನೀರು ಹರಿಸುತ್ತಿರುವ ಚನ್ನಗಿರಿ ತಾಲ್ಲೂಕು ಮಲಹಾಳ್ ಕೆರೆಗೆ ಭೇಟಿ ನೀಡಿ ವೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಉಬ್ರಾಣಿ - ಅಮೃತಾಪುರ ಏತನೀರಾವರಿ ಯೋಜನೆಗೆ 2004ರಲ್ಲಿ ಚಾಲನೆ ನೀಡಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನ ನೀಡಿ, ತ್ವರಿತವಾಗಿ ಕಾಮಗಾರಿ ಪೂರೈಸಲು ಕ್ರಮ ಕೈಗೊಳ್ಳಲಾಯಿತು. ್ಙ102 ಕೋಟಿ ವೆಚ್ಚದ ಈ ಯೋಜನೆ ಅಡಿ ತರೀಕೆರೆ ತಾಲ್ಲೂಕಿನ ಅಮೃತಾಪುರ ಹೋಬಳಿಯ 57 ಹಾಗೂ ಚನ್ನಗಿರಿ ತಾಲ್ಲೂಕು ಉಬ್ರಾಣಿ ಹೋಬಳಿಯ 89 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ 11 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ದೊರೆಯಲಿದೆ ಎಂದರು.

ಭದ್ರಾವತಿ ಸಮೀಪದ ಭದ್ರಾನದಿಯಿಂದ ಗುರುತ್ವಾಕರ್ಷಣೆ ಮೂಲಕ 27 ಕಿ.ಮೀ. ನೀರು ಹರಿಯುತ್ತದೆ. ಒಂದು ಕೆರೆಗೆ ನೀರು ಹರಿಸಿದ ನಂತರ ನೈಸರ್ಗಿಕವಾಗಿ ನೀರು ಉಳಿದ ಕೆರೆಗಳನ್ನು ತಲುಪಲಿದೆ. ಭದ್ರಾವತಿ ನಗರ, ಅರಣ್ಯ ಹಾಗೂ ರೈಲು ಮಾರ್ಗ ಹಾದು ಪೈಪ್‌ಲೈನ್ ಅಳವಡಿಸಬೇಕಿದ್ದ ಕಾರಣ ಯೋಜನೆ ವಿಳಂಬವಾಯಿತು ಎಂದು ಮಾಹಿತಿ ನೀಡಿದರು.

ಕೃಷ್ಣ ತುಂಡುಗುತ್ತಿಗೆ ಹಗರಣದಲ್ಲಿ ದೇವೇಗೌಡರ ವಿರುದ್ಧ ಇರುವ ಆಪಾದನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಪ್ರಕರಣ ವಿಚಾರಣೆಯ ಹಂತದಲ್ಲಿ ಇರುವ ಕಾರಣ ಆ ಬಗ್ಗೆ ಏನನ್ನೂ ಪ್ರತಿಕ್ರಿಯಿಸುವುದಿಲ್ಲ. ಈಗಾಗಲೇ, ಎಲ್ಲ ದಾಖಲೆ ಸಲ್ಲಿಸಿದ್ದೇವೆ. ಒಂದುವೇಳೆ ಪ್ರತಿಕ್ರಿಯಿಸಿದರೆ ತನಿಖೆ ಮೇಲೆ ಪ್ರಭಾವ ಬೀರಿದಂತೆ ಆಗುತ್ತದೆ ಎಂದರು.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು. ಮಧುಕರ ಶೆಟ್ಟಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ನೀರಾವರಿ ಇಲಾಖೆಯ ಜವಾಬ್ದಾರಿಯನ್ನು ತಾವು ವಹಿಸಿಕೊಂಡ ನಂತರ ಹೆಚ್ಚುವರಿ ಹಣ ಬಿಡುಗಡೆಗೆ ಕಡಿವಾಣ ಹಾಕಿದ್ದೇನೆ. ಜಡ್ಡುಗಟ್ಟಿದ ಇಲಾಖೆಗೆ ಕ್ರಿಯಾಶೀಲತೆ ನೀಡಿದ್ದೇನೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.