ADVERTISEMENT

ಕನ್ನಡದ ಉಳಿವಿಗೆ ಗೋಕಾಕ್ ಮಾದರಿ ಹೋರಾಟ: ಹಾಲಂಬಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 6:35 IST
Last Updated 14 ಜೂನ್ 2012, 6:35 IST

ದಾವಣಗೆರೆ: ಕನ್ನಡ ಭಾಷೆಯ ಮೇಲೆ ಇಂಗ್ಲಿಷ್ ಹಾವಳಿ ಹಾಗೂ ನಾಡಿನಲ್ಲಿ ಕನ್ನಡದ ಉಳಿವಿಗಾಗಿ ಗೋಕಾಕ್ ಮಾದರಿಯ ಹೋರಾಟ ನಡೆಯಬೇಕಿದೆ. ಅದಕ್ಕಾಗಿ ವೈಯಕ್ತಿಕವಾಗಿ ನೇತೃತ್ವ ವಹಿಸಲಿದ್ದು ಎಲ್ಲರೂ ಕೈಜೋಡಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಪುಂಡಲೀಕ ಹಾಲಂಬಿ ಕೋರಿದರು.

ನಗರದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ಅನ್ನ ಕೊಡುವ ಭಾಷೆ ಅಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಎಷ್ಟು ಮಂದಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರಿಗೆ ಅನ್ನ ಸಿಕ್ಕಿದೆ ಎಂಬ ಅಂಕಿ ಅಂಶವನ್ನು ಸರ್ಕಾರ ನೀಡಲಿ. ಕನ್ನಡಕ್ಕೆ ಶಕ್ತಿ ತುಂಬಬೇಕು. ಆದರೆ, 341 ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್‌ನ್ನು ಮಾಧ್ಯಮವಾಗಿ ಬಳಸಲಾಗುತ್ತಿದೆ. ಭಾಷಾನೀತಿ ಅನ್ವಯ ಕಾರ್ಯ ನಿರ್ವಹಿಸುವ ಶಿಕ್ಷಣ ವ್ಯವಸ್ಥೆ ಈ ರೀತಿಯ ಧೋರಣೆ ಅನುಸರಿಸುವುದರಿಂದ ಕನ್ನಡದ ಮೇಲೆ ಮಾರಕ ಪರಿಣಾಮ ಉಂಟಾಗಲಿದೆ ಎಂದು ಹೇಳಿದರು.

ADVERTISEMENT

ಭಾಷಾ ನೀತಿ ಜಾರಿ ಮತ್ತು ಕನ್ನಡದ ಸ್ಥಾನಮಾನ ಕುರಿತು ಚರ್ಚಿಸಲು ಮುಖ್ಯಮಂತ್ರಿಯನ್ನು ಆಹ್ವಾನಿಸಿ ಪತ್ರ ಬರೆದಿದ್ದೆ. ಅದರ ಪ್ರತಿ ಈಗಲೂ ಇದೆ. ಆದರೆ, ಸಿಎಂ ತಮಗೆ ಪತ್ರವೇ ಸಿಕ್ಕಿಲ್ಲ ಎನ್ನುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ಸರಿಯಾಗಿ ಕನ್ನಡ ಬೋಧನೆ ಆಗುತ್ತಿದೆಯೇ ಎಂದು ಸರ್ಕಾರ ತಜ್ಞರ ಮೂಲಕ ಪರಿಶೀಲಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಇದೇ ಮೃದು ಧೋರಣೆ ಮುಂದುವರಿದರೆ ಮುಂದೆ ಶಿಕ್ಷಣ ವ್ಯಾಪಾರದ ಸರಕಾಗಿ ಯಾರಿಗೂ ದೊರೆಯದಂತಾದೀತು ಎಂದು ಆತಂಕ ವ್ಯಕ್ತಪಡಿಸಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯಲ್ಲಿ ನಡೆಸುವ ಬಗ್ಗೆ ಜಿಲ್ಲಾಘಟಕದ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಅವರು ಕೋರಿದಾಗ, ಖಂಡಿತವಾಗಿಯೂ ಈ ವಿಚಾರವನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು. ವೈಯಕ್ತಿಕವಾಗಿ ತಾವು ದಾವಣಗೆರೆ ಪರ ನಿಲ್ಲುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.