ADVERTISEMENT

ಕರ್ನಾಟಕದ ಉದಾರ ಸಹಕಾರ: ಸ್ವಾಮೀಜಿ ಶ್ಲಾಘನೆ

41ನೇ ವರ್ಷದ ಶ್ರಾವಣಮಾಸ ಮಹಾಪೂಜೆ ಸಮಾರೋಪದಲ್ಲಿ ಕೇದಾರಶ್ರೀ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 5:16 IST
Last Updated 7 ಸೆಪ್ಟೆಂಬರ್ 2013, 5:16 IST

ಜಗಳೂರು: ಉತ್ತರಾಖಂಡ ರಾಜ್ಯದಲ್ಲಿ ಈಚೆಗೆ ಸಂಭವಿಸಿದ ಜಲಪ್ರಳಯದಲ್ಲಿ 120ಕ್ಕೂ ಹೆಚ್ಚು ಹಳ್ಳಿಗಳು, ಧಾರ್ಮಿಕ ಕೇಂದ್ರಗಳು ನಾಶವಾಗಿದ್ದು, ಪರಿಹಾರ ಕಾರ್ಯಗಳಿಗಾಗಿ ಕರ್ನಾಟಕ ರಾಜ್ಯ ಉದಾರವಾಗಿ ಸಹಕರಿಸಿದೆ ಎಂದು ಉತ್ತರಾಖಂಡ ರಾಜ್ಯದ ಕೇದಾರ ಪೀಠದ ಭೀಮಾಶಂಕರಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಕಳೆದ 30 ದಿನಗಳಿಂದ ಕೇದಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ 41ನೇ ವರ್ಷದ ಇಷ್ಟಲಿಂಗ ಶ್ರಾವಣಮಾಸ ಮಾಹಾಪೂಜಾ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಉತ್ತರಾಖಂಡ ರಾಜ್ಯದಲ್ಲಿರುವ ಕೇದಾರ ಪೀಠದ ಮೂಲ ಕರ್ನಾಟಕ. ಪ್ರಳಯ ಸಂತ್ರಸ್ತರಿಗಾಗಿ ರಾಜ್ಯದ ಭಕ್ತ ಸಮುದಾಯ 10 ಸಾವಿರಕ್ಕೂ ಹೆಚ್ಚು ಸೀರೆ, ಆಹಾರ ಹಾಗೂ ಅಗತ್ಯ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.

ಸಂಪೂರ್ಣ ನಾಶವಾಗಿರುವ  ಕೇದಾರ ಕ್ಷೇತ್ರದ ಪುನರ್ ಸ್ಥಾಪನೆಗೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಚಿವರು, ಶಾಸಕರು, ಹಾಗೂ ಎಲ್ಲಾ ಜನಪ್ರತಿನಿಧಿಗಳು, ಭಕ್ತರು ಉದಾರವಾಗಿ ಸ್ಪಂದಿಸಬೇಕು. ಸಂಕಷ್ಟದಲ್ಲಿರುವ ಉತ್ತರಾಖಂಡದ ಜನರ ಕಣ್ಣೀರನ್ನು ಒರೆಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು  ಕೇದಾರ ಸ್ವಾಮೀಜಿ ಮನವಿ ಮಾಡಿದರು.

ಜಲಪ್ರಳಯದಲ್ಲಿ ಪ್ರಾಣತೆತ್ತ ಸಾವಿರಾರು ಜನರ ಆತ್ಮಗಳಿಗೆ ಶಾಂತಿ ಸಿಗಲೆಂದು ಹಾರೈಸಿ ಕಣ್ವಕುಪ್ಪೆ ಗವಿಮಠದಲ್ಲಿ ವಿಶೇಷ ಪೂಜಾಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮಾನವ ಕುಲದ ರಕ್ಷಣೆಗಾಗಿ ಒಂದು ತಿಂಗಳ ಅವಧಿಯ ಇಷ್ಟ ಲಿಂಗ ಪೂಜೆ ಇಲ್ಲಿ ನಡೆದಿದ್ದು, ಈ ಕಾರಣಕ್ಕೆ ಗವಿಮಠ ಕೇದಾರದಂತೆ ಪುಣ್ಯಸ್ಥಳವಾಗಿ ಮಾರ್ಪಟ್ಟಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್ ಮಾತನಾಡಿ, ಉತ್ತರಾಖಂಡದಲ್ಲಿ ಜಲಪ್ರಳಯದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಸಚಿವ ಸಂತೋಷ್‌ಲಾಡ್ ನೇತೃತ್ವದಲ್ಲಿ ರಾಜ್ಯದ ಭಕ್ತರ ನೆರವಿಗೆ ಧಾವಿಸಲಾಗಿತ್ತು. ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ 5ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ. ಕೇದಾರ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, 4 ವರ್ಷದ ಸತತ ಸಂಕಲ್ಪದ ಕಾರಣ ಕೇದಾರ ಶ್ರೀಗಳು ಗವಿಮಠಕ್ಕೆ ಆಗಮಿಸಿರುವುದು ನಮ್ಮೆಲ್ಲರ ಪುಣ್ಯ ಎಂದರು.

ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್, ಕಣ್ವಕುಪ್ಪೆ ಗವಿಮಠದಲ್ಲಿ ಕೇದಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆಯಿಂದ ನಾಡಿನಲ್ಲಿ ಸಮೃದ್ಧಿ ಬರಲಿ ಎಂದರು.

ಶಾಸಕ ಎಚ್.ಪಿ. ರಾಜೇಶ್ ಸಮಾರಂಭ ಉದ್ಘಾಟಿಸಿದರು. ಉತ್ತರಾಖಂಡ ಶಾಸಕಿ ಶೈಲಜಾ ರಾಣಿ ರಾವತ್, ಹರಿಹರ ಶಾಸಕ ಎಚ್.ಎಸ್. ಶಿವಶಂಕರ್, ಚಳ್ಳಕೆರೆ ಶಾಸಕ ರಘುಮೂರ್ತಿ, ವಿಧಾನಪರಿಷತ್ ಸದಸ್ಯ ಡಾ.ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಜಿ.ಪಂ. ಅಧ್ಯಕ್ಷೆ ಶೀಲಾ ಗದ್ದಿಗೇಶ್, ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ನಾಗರಾಜ್, ಸದಸ್ಯರಾದ ಕೆ.ಪಿ. ಪಾಲಯ್ಯ, ಜಯಲಕ್ಷ್ಮೀ ಮಹೇಶ್, ಮಹಾರಾಷ್ಟ್ರ ಮಾಜಿ ಸ್ಪೀಕರ್ ಮಾದವ್‌ರಾವ್, ಜಿಲ್ಲಾಧಿಕಾರಿ ಅಂಜನ್‌ಕುಮಾರ್, ವಾಗೀಶ್, ಕೆಂಚನಗೌಡ, ತಹಶೀಲ್ದಾರ್ ರೇಷ್ಮಾ ಹಾನಗಲ್ ಸಿಪಿಐ ತಿಪ್ಪೇಸ್ವಾಮಿ ಹಾಜರಿದ್ದರು.

ಸಮಾರಂಭಕ್ಕೆ ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಉತ್ತರಾಖಂಡ ರಾಜ್ಯ ಸೇರಿದಂತೆ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.