ADVERTISEMENT

ಕಲೆಯ ಅಭಿವ್ಯಕ್ತಿಗೆ ರೇಖೆಗಳ ಪಾತ್ರ ಪ್ರಮುಖ: ಜಾಧವ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 10:05 IST
Last Updated 7 ಫೆಬ್ರುವರಿ 2012, 10:05 IST

ದಾವಣಗೆರೆ: ಚಿತ್ರಕಲೆಯಲ್ಲಿ ರೇಖೆಗಳು ಮುಖ್ಯವಾಗಿದ್ದು ಕಲೆಯ ಅಭಿವ್ಯಕ್ತಿಯಲ್ಲಿ ಅವು ಮಹತ್ವದ ಪಾತ್ರ ವಹಿಸುತ್ತವೆ ಎಂದು ಲಲಿತಕಲಾ ಮಹಾ ವಿದ್ಯಾಲಯದ ವಾಣಿಜ್ಯಕಲಾ ವಿಭಾಗದ ನಿವೃತ್ತ ಮುಖ್ಯಸ್ಥ ಮಲ್ಲಿಕಾರ್ಜುನ ಜಾಧವ್ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾಲಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ಕಲಾವಿದ ಎನ್.ಟಿ. ರಾಘವೇಂದ್ರ ನಾಯಕ ಅವರ `ಚಲಿಸುವ ರೇಖೆಗಳು~ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜ್ಞಾನ, ಭಾವದ ಅಭಿವ್ಯಕ್ತಿಯೇ ಕಲೆಯಾಗಿದ್ದು, ರೇಖೆಗಳು ಕಲೆಗೆ ಚೈತನ್ಯ ತುಂಬುತ್ತವೆ. ಯುವ ಕಲಾವಿದರು ತಮ್ಮ ಅನುಭವವನ್ನು ಚಿತ್ರಗಳ ಮೂಲಕ ಅಭಿವ್ಯಕ್ತಿಸಬೇಕು ಎಂದು ಸಲಹೆ ನೀಡಿದರು.

ಲೇಖಕಿ ಟಿ. ಗಿರಿಜಾ ಮಾತನಾಡಿ, ಸಾಹಿತ್ಯಕ್ಕೂ ಚಿತ್ರಕಲೆಗೂ ಅವಿನಾಭಾವ ಸಂಬಂಧವಿದೆ. ಅವೆರಡೂ ಜ್ಞಾನದ ವಿಕಾಸ ಹಾಗೂ ಮನಸ್ಸಿಗೆ ಉಲ್ಲಾಸ ನೀಡುವ ಕೆಲಸವನ್ನು ಮಾಡುತ್ತವೆ. ಚಿತ್ರಕಲೆ ಮನುಷ್ಯ ಹುಟ್ಟಿದಾಗಿನಿಂದಲೂ ಬಂದಿದ್ದು, ಪ್ರಾಗೈತಿಹಾಸಿಕ ಕಾಲದಿಂದಲೂ ಅದರ ಕುರುಹುಗಳನ್ನು ಕಾಣಬಹುದು ಎಂದು ಹೇಳಿದರು.

ಮಹಿಳೆಯರು ಬಿಡಿಸುವ ರಂಗೋಲಿಯಲ್ಲೂ ರೇಖಾ ಚಿತ್ರಗಳಿರುತ್ತವೆ. ಮಕ್ಕಳಿಗೆ ಬಾಲ್ಯದಿಂದಲೇ ಚಿತ್ರಕಲೆಯ ಬಗ್ಗೆ ಅಭಿರುಚಿ ಬೆಳೆಸಬೇಕಾದ ಅಗತ್ಯವಿದೆ. ಇತ್ತೀಚೆಗೆ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.

ವಿದ್ಯಾಲಯದ ಸಂಯೋಜನಾಧಿಕಾರಿ ಸಿ.ಕೆ. ಶ್ರೀನಿವಾಸ್ ಮಾತನಾಡಿದರು. ಎಜು ಏಷ್ಯಾ ಸಮೂಹ ಶಾಲೆಗಳ ಅಧ್ಯಕ್ಷೆ ನೀಲ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಎನ್.ಟಿ. ರಾಘವೇಂದ್ರ ನಾಯಕ ಹಾಜರಿದ್ದರು.
ಹಜರತ್ ಅಲಿ ಸ್ವಾಗತಿಸಿದರು. ಪ್ರದೀಪ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.