ADVERTISEMENT

ಕಾಂಗ್ರೆಸ್‌ಗೆ ನಾಳೆ ಸಾಮೂಹಿಕ ರಾಜೀನಾಮೆ

ಶಾಮನೂರುಗೆ ಕೈತಪ್ಪಿದ ಸಚಿವ ಸ್ಥಾನ: ರಾಜೀನಾಮೆ ನೀಡಿದ ಪಾಲಿಕೆಯ 39 ಕಾಂಗ್ರೆಸ್‌ ಸದಸ್ಯರು

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 6:03 IST
Last Updated 9 ಜೂನ್ 2018, 6:03 IST

ದಾವಣಗೆರೆ: ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಮೇಯರ್‌ ಶೋಭಾ ಪಲ್ಲಾಗಟ್ಟೆ ಸೇರಿ ಮಹಾನಗರ ಪಾಲಿಕೆಯ ಕಾಂಗ್ರೆಸ್‌ನ 38 ಸದಸ್ಯರು ಶುಕ್ರವಾರ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪಾಲಿಕೆಯ ಸದಸ್ಯರು, ಜಿಲ್ಲಾ ಮತ್ತು ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳು ಶನಿವಾರ ಬೆಂಗಳೂರಿಗೆ ತೆರಳಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ‘ಸಚಿವ ಸಂಪುಟ ವಿಸ್ತರಣೆ ಮಾಡಿದಾಗ ಪಕ್ಷದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಸ್ಥಾನ ನೀಡದೇ ಇರುವುದು ನಮ್ಮೆಲ್ಲರಿಗೂ ಬೇಸರ ಮೂಡಿಸಿದೆ. ಅವರಗೇ ಅಧಿಕಾರ ನೀಡದ ಮೇಲೆ ನಮಗೂ ಅಧಿಕಾರ ಬೇಡ. ಹೀಗಾಗಿ ಶನಿವಾರ ಕೆಪಿಸಿಸಿ ಕಚೇರಿಗೆ ತೆರಳಿ ಅಧ್ಯಕ್ಷರಿಗೆ ಜಿಲ್ಲಾ ಪಂಚಾಯಿತಿಯ ಎಂಟು ಸದಸ್ಯರು, ತಾಲ್ಲೂಕು ಪಂಚಾಯಿತಿಯ 10 ಸದಸ್ಯರು, ಪಾಲಿಕೆಯ 39 ಸದಸ್ಯರು, 16 ಬ್ಲಾಕ್‌
ಕಾಂಗ್ರೆಸ್‌ ಅಧ್ಯಕ್ಷರು, ಎಪಿಎಂಸಿ 10 ಸದಸ್ಯರು ಹಾಗೂ ನಾನೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇವೆ. ಅವರಿಗೆ ಸಚಿವ ಸ್ಥಾನ ನೀಡುವಂತೆ ರಾಷ್ಟ್ರೀಯ ನಾಯಕರ ಮೇಲೆ ಒತ್ತಡ ಹಾಕುತ್ತೇವೆ’ ಎಂದರು.

ADVERTISEMENT

‘ಶಾಮನೂರು ಅವರು ಐದು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಪಕ್ಷವನ್ನು ಸಂಘಟಿಸಿದ್ದಾರೆ. ಶಾಮನೂರು ಹಾಗೂ ಅವರ ಪುತ್ರ ಮಲ್ಲಿಕಾರ್ಜುನ ವರ್ಚಸ್ಸಿನಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ಅಸ್ತಿತ್ವದಲ್ಲಿದೆ. ಬಾಕಿ ಉಳಿದಿರುವ ಆರು ಸಚಿವ ಸ್ಥಾನಗಳ ಪೈಕಿ ಒಂದನ್ನು ಶಾಮನೂರು ಅವರಿಗೆ ನೀಡಬೇಕು. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲೂ ಪಕ್ಷದ ಬೆಳವಣಿಗೆಗೆ ಅನುಕೂಲವಾಗಲಿದೆ’ ಎಂದು ಮಂಜಪ್ಪ ಪ್ರತಿಪಾದಿಸಿದರು.

‘50 ಬಸ್‌ಗಳಲ್ಲಿ ನಾಳೆ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಬೆಂಗಳೂರಿಗೆ ತೆರಳುತ್ತೇವೆ. ಯಾವ ಕಾರಣಕ್ಕೆ ಶಾಮನೂರು ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂಬುದನ್ನು ರಾಜ್ಯಾಧ್ಯಕ್ಷರು ನಮಗೆ ತಿಳಿಸಬೇಕು. ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ನಮ್ಮ ರಾಜೀನಾಮೆ ಅಂಗೀಕರಿಸಬೇಕು. ಆಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ನಿಷ್ಕ್ರಿಯವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

‘ವಯಸ್ಸಾಗಿರುವ ಕಾರಣಕ್ಕೆ ಅವರನ್ನು ಕೈಬಿಟ್ಟಿದ್ದಾರೋ ಅಥವಾ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಅವರು ತಳೆದಿದ್ದ ನಿಲುವಿನಿಂದಾಗಿ ಪಕ್ಷದ ವರಿಷ್ಠರು ಈ ನಿರ್ಧಾರ ತೆಗೆದುಕೊಂಡಿದ್ದಾರೋ ನಮಗೆ ಗೊತ್ತಿಲ್ಲ. ಪಕ್ಷಕ್ಕೆ ರಾಜೀನಾಮೆ ನೀಡಿದರೂ ನಾವು ಯಾರೂ ಬಿಜೆಪಿ ಜೊತೆ ಕೈಜೋಡಿಸುವುದಿಲ್ಲ’ ಎಂದು ಮಂಜಪ್ಪ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಚಮನ್‌ಸಾಬ್‌, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಚ್‌. ಓಬಳಪ್ಪ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಶ್ವಿನಿ ಪ್ರಶಾಂತ್‌, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ, ಪಾಲಿಕೆಯ ಸದಸ್ಯರಾದ ಎಂ. ಹಾಲೇಶ್‌, ಶಿವನಳ್ಳಿ ರಮೇಶ್‌ ಸೇರಿ 30ಕ್ಕೂ ಹೆಚ್ಚು ಸದಸ್ಯರು, ದಾವಣಗೆರೆ ಎಪಿಎಂಸಿ ಅಧ್ಯಕ್ಷ ಮುದ್ದೇಗೌಡ ಗಿರೀಶ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬಳಿಕ ಮೇಯರ್‌ ಶೋಭಾ ಪಲ್ಲಾಗಟ್ಟೆ ನೇತೃತ್ವದಲ್ಲಿ ಕಾಂಗ್ರೆಸ್‌ನ ಸದಸ್ಯರು ಮಹಾನಗರ ಪಾಲಿಕೆಗೆ ತೆರಳಿ ಆಯುಕ್ತ ಇಸ್ಲಾವುದ್ದೀನ್‌ ಜೆ. ಗದ್ಯಾಳ್‌ ಅವರಿಗೆ ಸಾಮೂಹಿಕವಾಗಿ ರಾಜೀನಾಮೆ ಪತ್ರ ಸಲ್ಲಿಸಿದರು.

ದಾವಣಗೆರೆ ಎಪಿಎಂಸಿಯ ಕಾಂಗ್ರೆಸ್‌ನ 10 ಸದಸ್ಯರು ಗುರುವಾರ ರಾಜೀನಾಮೆ ಸಲ್ಲಿಸಿದ್ದರು.

ಸಚಿವ ಸ್ಥಾನ ಇಲ್ಲದಿದ್ದರೂ ಜನಸೇವೆ ಮಾಡುವೆ: ಶಾಮನೂರು

‘ಹೋರಾಟ ನಡೆಸಿ, ರಾಜೀನಾಮೆ ನೀಡಿ ಎಂದು ನಾನು ಯಾರಿಗೂ ಹೇಳಿಲ್ಲ. ಬಹುಶಃ ನನ್ನ ಮೇಲಿನ ಅಭಿಮಾನಕ್ಕೆ ಅವರು ಈ ನಿರ್ಧಾರ ಕೈಗೊಂಡಿರಬಹುದು’ ಎಂದು ಶಾಮನೂರು ಶಿವಶಂಕರಪ್ಪ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

‘ಜನ ನನ್ನನ್ನು ಆರಿಸಿ ಕಳುಹಿಸಿದ್ದಾರೆ. ಸಚಿವ ಸ್ಥಾನ ನನಗೆ ಕೊಡದಿದ್ದರೂ ಜನರ ಕೆಲಸ ಮಾಡಬೇಕಾಗಿದೆ. ಹೀಗಾಗಿ ದಾವಣಗೆರೆಗೆ ಬಂದ ತಕ್ಷಣವೇ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಮಳೆಗಾಲ ಬಂದಿದ್ದರಿಂದ ಚರಂಡಿ ನೀರು ಸುಗಮವಾಗಿ ಹರಿದು ಹೋಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಚರಂಡಿಗಳನ್ನು ಸರಿಪಡಿಸಿ ಸೊಳ್ಳೆಯ ಕಾಟವನ್ನು ತಪ್ಪಿಸಬೇಕಾಗಿದೆ. ಸೋಮವಾರದಿಂದ ಹೊಸ ಕಾಮಗಾರಿಗಳಿಗೆ ಚಾಲನೆ ನೀಡುತ್ತೇನೆ’ ಎಂದು ಅವರು ತಿಳಿಸಿದರು.

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಯಾರಿಗೂ ಸಚಿವ ಸ್ಥಾನ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಜಿಲ್ಲೆಗಳಲ್ಲಿ ಪಕ್ಷದಿಂದ ಒಬ್ಬರು, ಇಬ್ಬರು ಮಾತ್ರ ಗೆದ್ದಿದ್ದಾರೆ. ಹೀಗಾಗಿ ಸಚಿವ ಸ್ಥಾನವನ್ನು ಈ ಭಾಗದವರಿಗೆ ನೀಡಿರಲಿಕ್ಕಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

‘ದೇವೇಗೌಡರೊಂದಿಗೆ ಮೊದಲಿನಿಂದಲೂ ನಾನು ವಿಶ್ವಾಸದಿಂದ ಇದ್ದೇನೆ. ಅವರು ಅಧಿಕಾರದಲ್ಲಿ ಇಲ್ಲದಿದ್ದಾಗ ಸಾಕಷ್ಟು ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ದೇವೇಗೌಡರು, ಕುಮಾರಸ್ವಾಮಿ ದಾವಣಗೆರೆಗೆ ಬಂದಾಗ ನಮ್ಮ ಮನೆಗೆ ಬಂದು ಹೋಗುತ್ತಾರೆ. ಬೆಂಗಳೂರಿನಲ್ಲಿ ದೇವೇಗೌಡರನ್ನು ಭೇಟಿ ಮಾಡಿದ್ದರಲ್ಲಿ ವಿಶೇಷವೇನೂ ಇರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಶಾಮನೂರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.