ADVERTISEMENT

ಕಾಂಗ್ರೆಸ್‌ಗೆ ರಾಜಕಾರಣವೇ ದಂಧೆ:ಆರೋಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 9:40 IST
Last Updated 20 ಸೆಪ್ಟೆಂಬರ್ 2011, 9:40 IST

ದಾವಣಗೆರೆ: ಕಾಂಗ್ರೆಸ್ ರಾಜಕಾರಣವನ್ನು ದಂಧೆ ಮಾಡಿಕೊಂಡಿದ್ದು, ದೇಶದಲ್ಲಿ ಕುಸಿದಿರುವ ಮೌಲ್ಯವನ್ನು ಮೇಲೆತ್ತುವ ಮೂಲಕ ಬಿಜೆಪಿ ಹೊಸ ಭಾಷ್ಯ ಬರೆಯಬೇಕಿದೆ ಎಂದು ಸಂಸದ ಅನಂತ ಕುಮಾರ್ ಹೆಗಡೆ ಪ್ರತಿಪಾದಿಸಿದರು.

ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ರಾಜ್ಯ ಮಹಿಳಾ ಕಾರ್ಯಕಾರಿಣಿಯ ಸಮಾರೋಪದಲ್ಲಿ ಅವರು ಮಾತನಾಡಿದರು.ಸಮಾಜ ಹಾಗೂ ರಾಜಕಾರಣದಲ್ಲಿ ಇಂದು ಮೌಲ್ಯ ಕಣ್ಮರೆಯಾಗುತ್ತಿದೆ. ಹೊಸ ಮೌಲ್ಯದ ಮರುಸ್ಥಾಪನೆಗೆ ಬಿಜೆಪಿ ಯತ್ನಿಸುತ್ತಿದೆ.

ಪ್ರಸಕ್ತ ಸನ್ನಿವೇಶದಲ್ಲಿ ಪಕ್ಷದಲ್ಲೂ ಅಲ್ಪಸ್ವಲ್ಪ ಓರೆಕೋರೆ ಇರುವುದು ಸಹಜ. ಆದರೆ, ಅದನ್ನು ತಿದ್ದಿಕೊಂಡು ರಾಷ್ಟ್ರ ರಾಜಕಾರಣಕ್ಕೆ ಧನಾತ್ಮಕ ದಿಕ್ಕು ತೋರಿಸುವ ಸಾಮರ್ಥ್ಯ ಬಿಜೆಪಿಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇವಲ ರಾಜಕಾರಣದಲ್ಲಿ ದೃಷ್ಟಿ ನೆಟ್ಟಿರುವ ಪಕ್ಷ ನಮ್ಮದಲ್ಲ. ಸಮಾಜ ಪರಿವರ್ತನೆ, ಭವ್ಯ ಭಾರತ ನಿರ್ಮಾಣ ನಮ್ಮ ಗುರಿ. ಅದಕ್ಕಾಗಿ ಸಂಘಟನೆ ಗಟ್ಟಿಗೊಳ್ಳಬೇಕು. ಸಂಘಟನೆ ಎನ್ನುವುದು ಇಂದು ಕಟ್ಟಿ ನಾಳೆಯೇ ಗುರಿ ಮುಟ್ಟುವುದಲ್ಲ. ಅದು ನಿರಂತರ ಯಾತ್ರೆ. ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲದಿದ್ದರೂ, ಕೊನೇ ಪಕ್ಷ ಅಲ್ಲಿ ನಮ್ಮ ಹೆಜ್ಜೆ ಗುರುತು ಮೂಡಿಸಬೇಕು ಎಂದು ಸಲಹೆ ನೀಡಿದರು.

ಮಹಿಳೆಯರು ರಾಜಕೀಯ ಮೀಸಲಾತಿ ಸೌಲಭ್ಯ ಪಡೆದುಕೊಳ್ಳಬೇಕು. ಯಾರೂ ತಮ್ಮನ್ನು ಗುರುತಿಸಲಿಲ್ಲ ಎಂದು ಕೊರಗುವ ಬದಲು ಆತ್ಮವಿಶ್ವಾಸದಿಂದ ಉನ್ನತ ಸ್ಥಾನ ಪಡೆಯಲು ಶ್ರಮಿಸಬೇಕು. ಸಾಮಾನ್ಯರಿಂದಲೇ ಬಹುತೇಕ ಇತಿಹಾಸ ನಿರ್ಮಾಣ ಸಾಧ್ಯವಾಗಿದೆ. ಮೊದಲು ಪ್ರವಾಹದ ವಿರುದ್ಧ ಈಜುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಹಿಳಾ ಮೋರ್ಚಾ ರಾಜ್ಯ ಘಟಕದ  ಅಧ್ಯಕ್ಷೆ ರೀನಾ ಪ್ರಕಾಶ್ ಮಾತನಾಡಿ, ಹಿಂದಿನ ಸಭೆಯ ನಿರ್ಣಯದಂತೆ ರಾಜ್ಯದ ಹಾಸ್ಟೆಲ್‌ಗಳ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದೆವು. ಅದು ರಾಜ್ಯದ ಇತಿಹಾಸದಲ್ಲಿ ಮೈಲುಗಲ್ಲು.
 
ಈ ಬಾರಿ ಜೈಲಿನಲ್ಲಿರುವ ಮಹಿಳಾ ಕೈದಿಗಳ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲಿದ್ದೇವೆ. ಮಹಿಳಾ ಪೊಲೀಸರ ಕುರಿತು ಮಾಹಿತಿ ಸಂಗ್ರಹಿಸಲಿದ್ದೇವೆ ಎಂದು ವಿವರ ನೀಡಿದರು.

ಮಹಿಳಾ ಸಂಘಟನೆಗೆ ಒತ್ತು ನೀಡಲಾಗುವುದು. 40 ಸಾವಿರ ಬೂತ್‌ಗಳಲ್ಲಿ ಸಂಘಟನೆ ಬಲಪಡಿಸಲಾಗುವುದು. ರಾಜ್ಯದ 220 ಕೇಂದ್ರಗಳಲ್ಲಿ ಸಹೋದರಿ ನಿವೇದಿತಾ ಜನ್ಮದಿನ ಆಚರಿಸಲಾಗುವುದು ಎಂದರು.

ಮಹಿಳಾ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷೆ ಪೂರ್ಣಿಮಾ ಪ್ರಕಾಶ್, ರಾಜ್ಯ ಘಟಕದ ಉಪಾಧ್ಯಕ್ಷೆ ಸುಲೋಚನಾ, ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ. ಗುರುಸಿದ್ದನಗೌಡ, `ದೂಡಾ~ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಟಿ. ಮುಕುಂದ, ಪಕ್ಷದ ರಾಜ್ಯ ಕಾರ್ಯದರ್ಶಿ ನಂದೀಶ್, ಪಾಲಿಕೆ ಸದ್ಯರಾದ ಸುಧಾ ಜಯರುದ್ರೇಶ್, ಉಮಾ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.