ADVERTISEMENT

ಕುಡಿಯುವ ನೀರಿನ ಸಮಸ್ಯೆ: ನಾಗರಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 5:49 IST
Last Updated 27 ಡಿಸೆಂಬರ್ 2012, 5:49 IST

ಮಲೇಬೆನ್ನೂರು: ಇಲ್ಲಿನ ವಿವಿಧ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ನಾಗರೀಕರು ಕೊಡ ಹೊತ್ತು ತಿರುಗುವ ಪರಿಸ್ಥಿತಿ ಕಳೆದ 1 ವಾರದಿಂದ ನಿರ್ಮಾಣವಾಗಿದೆ.

ಭದ್ರಾನಾಲೆಯಲ್ಲಿ ನೀರು ಸ್ಥಗಿತಗೊಳಿಸಿದ ನಂತರ ಸಮಸ್ಯೆ ಹೆಚ್ಚಾಗಿದೆ. ನಲ್ಲಿ ನೀರಿನ ಪೂರೈಕೆ ಕಡಿಮೆಯಾಗಿದೆ. ಮನೆಗಳಲ್ಲಿನ ಪೈಪ್‌ಗಳಿಗೆ ಮೋಟಾರ್ ಹಚ್ಚುವ ಕಾರಣ ಕೆಳಭಾಗಕ್ಕೆ ನೀರು ಸರಬರಾಜಾಗುತ್ತಿಲ್ಲ.

ಸಾರ್ವಜನಿಕ ನಲ್ಲಿ, ಕಿರು ನೀರು ಸರಬರಾಜು ಕೇಂದ್ರದ ಮುಂದೆ ಕೊಡ ಹಿಡಿದು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಂಟೆಗಟ್ಟಲೆ ಕಾದರೂ 2 ಕೊಡ ನೀರು ಸಿಗುವುದಿಲ್ಲ ಎನ್ನುತ್ತಾರೆ ನಾಗರಾಜ್, ಮಹೇಶ್, ಬಸವರಾಜ್.

ಉಪ್ಪುನೀರಿನ ಬಾವಿ ನೀರಿನಲ್ಲಿ ಸ್ನಾನ ಮಾಡಿದರೆ ಮೈ ಕಡಿತ ಬರುತ್ತಿದೆ. ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರಿನಿಂದ ಪುಡಿಪದರ ಕಟ್ಟಿ ಪಾತ್ರೆಗಳು ಹಾಳಾಗಿವೆ ಎನ್ನುತ್ತಾರೆ ಅಯ್ಯಪ್ಪ ವ್ರತಧಾರಿಗಳು.

ಉಳ್ಳವರು ಶುದ್ದೀಕರಿಸಿದ ಕುಡಿಯುವ ನೀರನ್ನು ಕೊಂಡು ಬಳಸುತ್ತಾರೆ. ಕೂಲಿ ಕಾರ್ಮಿಕರು, ಬಡ ಜನತೆ ಉಪ್ಪು ನೀರನ್ನು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜ್ವರಬಾಧೆ, ಶೀತ ಕೆಮ್ಮು ಅನುಭವಿಸಬೇಕಾಗಿದೆ ಎನ್ನುತ್ತಾರೆ ಆಶ್ರಯ ಕಾಲೊನಿ ನಾಗರೀಕರಾದ ಹನುಮಂತಪ್ಪ, ರಫೀಸಾಬ್.
ರಾತ್ರಿವೇಳೆ ವಾಲ್ವ್ ಕೆಲವರು ನಕಲಿ ಕೀ ಬಳಸಿ ವಾಲ್ವ್ ತಿರುಗಿಸಿಕೊಂಡು ಹೋಗುತ್ತಾರೆ. ಟ್ಯಾಂಕ್ ಬೆಳಗಿನಹೊತ್ತಿಗೆ ಖಾಲಿಯಾಗಿರುತ್ತದೆ. ಜನರಿಂದ ಬೈಗುಳ ಎದುರಿಸಬೇಕಿದೆ ಎನ್ನುತ್ತಾರೆ ನೀರುಗಂಟಿಗಳು.

ಕುಡಿಯುವ ನೀರು ಸರಬರಾಜು ಮಾಡುವ ಬಹುತೇಕ ಕೊಳವೆಬಾವಿಗಳಲ್ಲಿ ಇರುವರಿ ಕುಸಿದಿದೆ. 3 ಕೊಳವೆಬಾವಿ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಮೋಟರ್ ಸುಟ್ಟು ಹೋಗಿವೆ. ಸಮಯಕ್ಕೆ ಸರಿಯಾಗಿ ಟ್ಯಾಂಕ್ ತುಂಬದಿರುವುದು ನೀರಿನ ಪೂರೈಕೆ ವ್ಯತ್ಯಯಕ್ಕೆ ಮುಖ್ಯ ಕಾರಣ.

ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆ ಒಂದೆ ಪರಿಹಾರ, ನಾಲೆ ನೀರು ಬರುವವರೆಗೆ ಸಮಸ್ಯೆ ಇದೆ ಎನ್ನುತ್ತಾರೆ ಪಿಡಿಒ ಮೃತ್ಯುಂಜಯಪ್ಪ.
ಚಳಿಗಾಲದಲ್ಲಿ  ನೀರಿನ ಸಮಸ್ಯೆ ಎದುರಾಗಿದ್ದು ಗ್ರಾಮ ಪಂಚಾಯ್ತಿ ಎಚ್ಚೆತ್ತು ಸಮಸ್ಯೆ ಪರಿಹರಿಸಲು ಕಾರ್ಯಪ್ರವೃತ್ತರಾಗಿ, ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕು.

ಮುಂಬರುವ ಅಮ್ಮನಹಬ್ಬ, ಉರುಸ್, ಬಸವೇಶ್ವರ ರಥೋತ್ಸವಕ್ಕೂ ಮುನ್ನ ನೆನೆಗುದಿಗೆ ಬಿದ್ದಿರುವ ರಾಜೀವ್‌ಗಾಂಧಿ ಯೋಜನೆ ತ್ವರಿತವಾಗಿ ಕಾರ್ಯಗತವಾಗ ಬೇಕು ಎನ್ನುತ್ತಾರೆ ಮಹಬೂಬ್ ಅಲಿ, ರೇವಣಸಿದ್ದಪ್ಪ, ನಾಗಭೂಷಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.