ADVERTISEMENT

ಕೆಪಿಎಸ್‌ಸಿ ಪರೀಕ್ಷೆ; ಪೂರ್ವಸಿದ್ಧತಾ ಸಭೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 10:00 IST
Last Updated 1 ಜೂನ್ 2011, 10:00 IST

ದಾವಣಗೆರೆ: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಪರೀಕ್ಷೆಗೆ ಸಂಬಂಧಿಸಿದಂತೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.

ಜೂನ್ 5ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಸಾಮಾನ್ಯ ಜ್ಞಾನ ಮಧ್ಯಾಹ್ನ 2ರಿಂದ 4ರವರೆಗೆ ಸಾಮಾನ್ಯ ಕನ್ನಡ ಹಾಗೂ ಇಂಗ್ಲಿಷ್ ಪರೀಕ್ಷೆಗಳು ನಡೆಯಲಿವೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.

ದಾವಣಗೆರೆಯಲ್ಲಿ 55 ಹಾಗೂ ಹರಿಹರದಲ್ಲಿ 9 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರಥಮದರ್ಜೆ ಸಹಾಯಕರ ಹುದ್ದೆಗೆ 19,296 ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ 3,600 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಕೊಠಡಿಯಲ್ಲಿ 24 ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
 
ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಪರಿವೀಕ್ಷಕರನ್ನು ನಿಯೋಜಿಸಲಾಗಿದೆ. ಎಲ್ಲಾ ಕೇಂದ್ರಗಳಿಗೂ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಶ್ನೆ ಪತ್ರಿಕೆ ಆಯಾ ಕೇಂದ್ರಗಳಿಗೆ ತಲುಪಿಸಲು 15 ಮಂದಿ (ದಾವಣಗೆರೆಗೆ 13 ಮತ್ತು ಹರಿಹರಕ್ಕೆ 2) ಮಾರ್ಗದರ್ಶಿ ಅಧಿಕಾರಿಗಳು (ರೂಟ್ ಆಫೀಸರ್ಸ್) ಇದ್ದಾರೆ. ಪರೀಕ್ಷಾ ಕೇಂದ್ರಗಳಾಗಿರುವ ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಕ್ತ ಸೂಚನೆ ನೀಡಲಾಗಿದೆ ಎಂದು ಪರೀಕ್ಷಾ ಮೇಲ್ವಿಚಾರಣೆ ಅಧಿಕಾರಿ ಡಿಡಿಪಿಯು ಬೆಳ್ಳಶೆಟ್ಟಿ ಮಾಹಿತಿ ನೀಡಿದರು.

ಪರೀಕ್ಷೆಗೆ ಸಂಬಂಧಿಸಿದಂತೆ ನಡೆಸಿರುವ ಪೂರ್ವಸಿದ್ಧತೆ ಕುರಿತು ಕೆಪಿಎಸ್‌ಸಿಗೆ ಮಾಹಿತಿ ನೀಡಲಾಗಿದೆ. ಯಾವುದೇ ಪರೀಕ್ಷಾ ಅವ್ಯವಹಾರಕ್ಕೆ ಅವಕಾಶವಾಗದಂತೆ ಪರೀಕ್ಷಾ ನಿರ್ವಹಣೆ ಮಾಡಲಾಗುವುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಲಿಪಿಕ (ಸಹಾಯಕ)ರ ನೆರವಿನಿಂದ ಅಂಧರೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಕಪ್ಪು ಶಾಯಿಯ ಪೆನ್ನು ಬಳಸಬೇಕು. ಪರೀಕ್ಷಾ ಕೇಂದ್ರದ ಸುತ್ತ ಸೆಕ್ಷನ್ 144 ಜಾರಿ ಗೊಳಿಸಲಾಗಿದೆ. ಮೊಬೈಲ್ ಫೋನ್, ಕ್ಯಾಲಿಕ್ಯುಲೇಟರ್‌ನಂಥ ಸಾಮಗ್ರಿಗಳಿಗೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್, ತಹಶೀಲ್ದಾರ್ ಡಾ.ಬಿ.ಆರ್. ಹರೀಶ್, ಜಿ.ಪಂ. ಉಪ ಕಾರ್ಯದರ್ಶಿ ಷಡಕ್ಷರಪ್ಪ ಹಾಗೂ ವಿವಿಧ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.