ADVERTISEMENT

ಕೊಳೆಗೇರಿಗಳಿಗೆ ಸೌಕರ್ಯ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 11:06 IST
Last Updated 18 ಡಿಸೆಂಬರ್ 2012, 11:06 IST

ದಾವಣಗೆರೆ: ಕೊಳೆಗೇರಿಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಸ್ಲಂ ಜನಾಂದೋಲನ, ಎಐಟಿಯುಸಿ, ಮಾನವ ಹಕ್ಕುಗಳ ವೇದಿಕೆ, ಮಂಡಕ್ಕಿ ಬಟ್ಟಿ ಕಾರ್ಮಿಕರ ಫಡರೇಷನ್, ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು.

ಆವರಗೆರೆ ದನದ ಓಣಿ ಸರ್ಕಾರಿ ಗೋಮಾಳದ ಜಾಗದಲ್ಲಿದ್ದು, 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇದುವರೆಗೂ ಬೀದಿದೀಪ, ಕುಡಿಯುವ ನೀರು, ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ಅಲ್ಲಿನ ಜನರ ಬದುಕು ದುಸ್ತರವಾಗಿದೆ. ಹಾಗೆಯೇ, ಹೆಗಡೆ ನಗರ, ಚಂದ್ರೋದಯ ನಗರ, ಬಾಷಾ ನಗರ, ಶಿವನಗರ, ಅಂಬೇಡ್ಕರ್ ನಗರ, ಎಸ್‌ಜೆಎಂ ನಗರ, ಮಟ್ಟಿಕಲ್ಲು, ಆರ್.ಜಿ. ರೈಸ್‌ಮಿಲ್ ಹಿಂಭಾಗ ಸೇರಿದಂತೆ ಬಹುತೇಕ ಕೊಳೆಗೇರಿಗಳಲ್ಲಿ ಮೂಲಸೌಕರ್ಯ ಇಲ್ಲದೇ ಪ್ರಾಣಿಗಳಂತೆ ಬದುಕು ನಡೆಸುತ್ತಿದ್ದಾರೆ. ಸ್ಲಂಗಳ ಅಭಿವೃದ್ಧಿಗೆ ಪಾಲಿಕೆ, ಜಿಲ್ಲಾಡಳಿತ ಗಮನ ನೀಡಿಲ್ಲ ಎಂದು ದೂರಿದರು.

ಬಹುತೇಕ ಸ್ಲಂಗಳಲ್ಲಿ ಚರಂಡಿ ಸಂಪೂರ್ಣ ಇಲ್ಲದಂತೆ ಇದೆ. ಕಸ ವಿಲೇವಾರಿ ಆಗದೇ ರೋಗ ಹರಡುವ ಭೀತಿ ಇದೆ. ವಾರಕ್ಕೆ ಒಮ್ಮೆ ಕುಡಿಯುವ ನೀರು ಬಿಡುವುದು ದುಸ್ತರವಾಗಿದೆ. ಕೂಡಲೇ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಮೂರು ದಿನಕ್ಕೆ ಒಮ್ಮೆ ನೀರು ಬಿಡಬೇಕು. ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಗಳ ಮುಖಂಡರಾದ ಎಚ್.ಕೆ. ರಾಮಚಂದ್ರಪ್ಪ, ಎಲ್.ಎಚ್. ಅರುಣ್‌ಕುಮಾರ್, ಆಲೂರು ನಿಂಗರಾಜ್, ಅರುಣ್‌ಕುಮಾರ್ ಕುರುಡಿ, ಆವರಗೆರೆ ವಾಸು, ಕುಕ್ಕುವಾಡ ಮಲ್ಲೇಶ್, ಸೈಯದ್ ಖಾಜಾಪೀರ್, ಮುಮ್ತಾಜ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.