ADVERTISEMENT

ಕೋಲಾಹಲ ಸೃಷ್ಟಿಸಿದ ಡೋರ್‌ನಂಬರ್ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 6:40 IST
Last Updated 1 ಫೆಬ್ರುವರಿ 2011, 6:40 IST

ದಾವಣಗೆರೆ: ನಗರದ ವಿವಿಧ ಬಡಾವಣೆಗಳಲ್ಲಿ ನಕಲಿ ಡೋರ್ ನಂಬರ್ ನೀಡಿ ಪಾಲಿಕೆಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ಸೋಮವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿ, ಕೋಲಾಹಲ ಸೃಷ್ಟಿಸಿತು.

ಪ್ರಕರಣ ಕುರಿತು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಪಕ್ಷಭೇದ ಮರೆತು ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಘಟನೆಯಲ್ಲಿ ಪಾಲಿಕೆಯ ಕೆಲ ಸಿಬ್ಬಂದಿ ಭಾಗಿಯಾಗಿ ಜನರನ್ನು ವಂಚಿಸಿದ್ದಾರೆ. ಅವರಿಗೆ ಆಯುಕ್ತರ ಶ್ರೀರಕ್ಷೆ ಇದೆ ಎಂದು ಆರೋಪಿಸಿದರು.

ಸಭೆಯ ಮಧ್ಯದಲ್ಲಿ ಈ ವಿಷಯ ಪ್ರಸ್ತಾಪಿಸಿದ ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್, ಬೋಗಸ್ ಸಹಿಹಾಕಿ 5 ಸಾವಿರಕ್ಕೂ ಹೆಚ್ಚು ನಿವೇಶನಗಳಿಗೆ ಅಕ್ರಮವಾಗಿ ಡೋರ್‌ನಂಬರ್ ನೀಡಲಾಗಿದೆ. ನಗರಸಭೆ ಅಸ್ತಿತ್ವಕ್ಕೆ ಬಂದು 61 ವರ್ಷ ಕಳೆದರೂ ಇಂತಹ ಹಗರಣ ನಡೆದಿರಲಿಲ್ಲ. ಹಣದ ಆಸೆಗೆ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸೇರಿ ಮುಗ್ಧ ನಾಗರಿಕರನ್ನು ವಂಚಿಸಿದ್ದಾರೆ. ಈ ಬಗ್ಗೆ ಇದುವರೆಗೂ ಯಾರ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.

ಸದಸ್ಯ ಭೈರಪ್ಪ ಮಾತನಾಡಿ, ನಕಲಿ ಡೋರ್‌ನಂಬರ್ ಕಾರಣದಿಂದ ಪಾಲಿಕೆಗೆ 39 ಕೋಟಿ ರೂ ವಂಚನೆಯಾಗಿದೆ ಎಂದು ಆಪಾದಿಸಿದರು.ಮಾಜಿ ಮೇಯರ್ ವಸಂತಕುಮಾರ್ ಮಾತನಾಡಿ, 1,843 ನಿವೇಶನಗಳಿಗೆ ಅಕ್ರಮ ಡೋರ್‌ನಂಬರ್ ನೀಡಿರುವ ಬಗ್ಗೆ ದಾಖಲೆ ಸಮೇತ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ, ಈ ಬಗ್ಗೆ ಇದುವರೆಗೂ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ. ಆಯುಕ್ತರು ನಿಷ್ಕ್ರೀಯರಾಗಿದ್ದಾರೆ. ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದರು.

ಕೃಷ್ಣಮೂರ್ತಿ ಪವಾರ್ ಮಾತನಾಡಿ, ಆಯುಕ್ತರು ಹಾಗೂ ಅಧಿಕಾರಿಗಳು ಇದರ ಹೊಣೆಹೊರಬೇಕು ಎಂದು ಒತ್ತಾಯಿಸಿದರು.
ಕೆಲ ಸದಸ್ಯರು ಪ್ರಕರಣದಲ್ಲಿ ಮುಗ್ಧ ಜನರಿಗೆ ತೊಂದರೆ ನೀಡುವುದು ಬೇಡ. ಅಕ್ರಮ ಇರುವ ನಂಬರ್‌ಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಎಂದು ಆಗ್ರಹಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.