ADVERTISEMENT

ಖಾತೆ ರಚನೆಗೆ ಆಗ್ರಹಿಸಿ ಪಾಲಿಕೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 9:05 IST
Last Updated 9 ಜೂನ್ 2011, 9:05 IST

ದಾವಣಗೆರೆ: ಪರಿವರ್ತಿತ ಭೂಮಿಗೆ ಖಾತೆ ಮಾಡಿಕೊಡಬೇಕು ಎಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ರಿಯಲ್ ಎಸ್ಟೇಟ್ ಡೀಲರ್ಸ್  ಮತ್ತು ಏಜೆಂಟ್ಸ್ ಅಸೋಸಿಯೇಷನ್  ನೇತೃತ್ವದಲ್ಲಿ ಪಾಲಿಕೆ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು.

ತಾಲ್ಲೂಕಿನ ಶಾಮನೂರು, ನಿಟುವಳ್ಳಿ, ಕುಂದುವಾಡ, ಆವರಗೆರೆ, ಆನೆಕೊಂಡ, ಕರೂರು ಗ್ರಾಮಗಳ ಜಮೀನನ್ನು ವಾಸಯೋಗ್ಯ ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆ. ಈ ಪ್ರದೇಶದಲ್ಲಿ ವಿಂಗಡಿಸಿರುವ ನಿವೇಶನಗಳ ಬಗ್ಗೆ ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಂತಿಮ ವಿನ್ಯಾಸ ಮಂಜೂರಾತಿ ದೊರೆತಿದೆ. ಅಲ್ಲದೆ ಪಾಲಿಕೆ ಕಾರ್ಯಾಲಯದಿಂದ ಡೋರ್‌ನಂಬರ್ ದೊರೆತಿದ್ದು ನೋಂದಣಿಯೂ ಆಗಿದೆ.

ಆದರೆ ಈಗ ಖಾತೆ ಮಾಡಲು  ಪಾಲಿಕೆ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ನಿವೇಶನಗಳಲ್ಲಿ ಎಲ್ಲ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ನಿವೇಶನಗಳ ಅಭಿವೃದ್ಧಿ ಶುಲ್ಕವನ್ನೂ ಪಾವತಿಸಲಾಗಿದೆ. ನಗರಸಭೆ ಇದ್ದಾಗಲೇ ಡೋರ್‌ನಂಬರ್ ಪಡೆಯಲಾಗಿದೆ.  ನಿವೇಶನದಾರರು ಅಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ, ನಿವೇಶನದಾರರು ಮತ್ತೆ ಖಾತೆ ಮಾಡಿಸಿಕೊಳ್ಳಲು ಹೋದಾಗ ಅಧಿಕಾರಿಗಳು ಆ ಪ್ರಕ್ರಿಯೆಗೆ ಒಪ್ಪುತ್ತಿಲ್ಲ ಎಂದು ದೂರಿದರು.

ಪಾಲಿಕೆ ಆಯುಕ್ತ ಪ್ರಸನ್ನಕುಮಾರ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ 1,850 ಅಕ್ರಮ ಡೋರ್‌ನಂಬರ್‌ಗಳನ್ನು ಗುರುತಿಸಲಾಗಿದೆ. ಯಾವುದೇ ಖಾತೆ ಮಾಡಲು ಸೂಕ್ತ ದಾಖಲೆ ಒದಗಿಸಬೇಕು. ಆಗ ಖಾತೆ ರಚನೆ ಬಗ್ಗೆ ಪರಿಶೀಲಿಸಬಹುದು ಎಂದು ತಿಳಿಸಿದರು.

ಅದಕ್ಕೆ ಒಪ್ಪದ ಸಂಘಟನೆಯವರು ಬಹಳ ಹಿಂದಿನ ಕಾಲದಲ್ಲಿ ನೋಂದಣಿಯಾಗಿರುವ, ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ದಾವಣಗೆರೆ ಇದ್ದಾಗಿನ ದಾಖಲೆಗಳನ್ನು ಒದಗಿಸಲಾಗದು. ಆದರೆ, ಇರುವ ನಿಯಮಗಳ ಪರಿಮಿತಿಯಲ್ಲಿ ಖಾತೆ ರಚಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಮನವಿ ಸಲ್ಲಿಸಿದರು.

ಅಸೋಸಿಯೇಷನ್ ಅಧ್ಯಕ್ಷ ಟಿ. ಬಸವರಾಜ್ ಶಾಮನೂರು, ಎಂ.ಎಚ್. ವಿರೂಪಾಕ್ಷಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಬಿ. ಮೋಹನ್‌ರಾವ್, ಎಸ್.ಬಿ. ಚಂದ್ರಪ್ಪ, ಕೆ.ಜಿ. ಚಂದ್ರಶೇಖರಪ್ಪ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.