ಜಗಳೂರು: ಉದ್ಯೋಗಖಾತ್ರಿ ಯೋಜನೆಯ ಜಾಬ್‌ಕಾರ್ಡ್‌ಗಳನ್ನು ನಮ್ಮಿಂದ ತೆಗೆದುಕೊಂಡು ಹೋಗಿರುವ ಗುತ್ತಿಗೆದಾರರು ಯಂತ್ರಗಳಿಂದ ಕಾಮಗಾರಿ ಮಾಡಿದ್ದಾರೆ. ನಂತರ ನಮಗೆ ಯಾವುದೇ ಹಣ ಕೊಟ್ಟಿಲ್ಲ. ನಮಗೆ ಹಣ ಕೊಡಿಸಿ ಸಾರ್.
-ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಶೋಕ್‌ಕುಮಾರ್ ಮನೋಳಿ ನೇತೃತ್ವದ ಅಧಿಕಾರಿಗಳ ತಂಡ ತಾಲ್ಲೂಕಿನ ಬರಪೀಡಿತ ಹಳ್ಳಿಗಳಿಗೆ ಶನಿವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮಸ್ಥರು ಅಧಿಕಾರಿಗಳ ಎದುರು ತಮ್ಮ ಅಳಲು ತೋಡಿಕೊಂಡಿದ್ದು ಹೀಗೆ.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮನೋಳಿ ಅವರು ಗ್ರಾಮಸ್ಥರನ್ನು ವಿಚಾರಿಸಿದ ಸಮಯದಲ್ಲಿ ಕಾಮಗಾರಿಗಳ ಸ್ವರೂಪ ಬಯಲಾಯಿತು.
ನಿಮ್ಮ ಜಾಬ್‌ಕಾರ್ಡ್‌ಗಳನ್ನು ಬೇರೆಯವರಿಗೆ ಕೊಟ್ಟಿದ್ದು ಯಾಕೆ? ಯಾರಿಗೆ ಕೊಟ್ಟಿದ್ದೀರಿ ಎಂಬ ಬಗ್ಗೆ ಲಿಖಿತವಾಗಿ ಬರೆದುಕೊಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮನೋಳಿ ಗ್ರಾಮಸ್ಥರಿಗೆ ಕೇಳಿದರು. ಇದರಿಂದ ವಿಚಲಿತರಾದ ಕೆಲವರು ಇಲ್ಲ ಸಾರ್, ಏನೂ ತೊಂದರೆ ಇಲ್ಲ. ಹೋಗಲಿ ಬಿಡಿ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು.
ದೊಣೆಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉದ್ಯೋಗಖಾತ್ರಿ ಯೋಜನೆಯಲ್ಲಿ ಕೂಲಿ ಕೆಲಸ ಕೊಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಮನೋಳಿ ಅವರು ಸ್ಥಳದಲ್ಲಿದ್ದ ಗ್ರಾ.ಪಂ. ಕಾರ್ಯದರ್ಶಿ ರಾಜಣ್ಣ ಅವರನ್ನು ಎಷ್ಟು ಜನಕ್ಕೆ ಇದುವರೆಗೆ ಕೆಲಸ ಕೊಟ್ಟಿದ್ದೀರಿ, ಎಷ್ಟು ಕೂಲಿಕಾರ್ಮಿಕರ ನೋಂದಣಿಯಾಗಿದೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಸ್ಪಷ್ಟ ಉತ್ತರ ನೀಡಲು ಕಾರ್ಯದರ್ಶಿ ತಡಬಡಾಯಿಸಿದರು. ಇದರಿಂದ ಸಿಡಿಮಿಡಿಗೊಂಡ ಮನೋಳಿ, ಗ್ರಾ.ಪಂ. ಕಾರ್ಯದರ್ಶಿ ರಾಜಣ್ಣ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡುವಂತೆ ಸ್ಥಳದಲ್ಲಿದ್ದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ. ಪ್ರಭುಸ್ವಾಮಿ ಅವರಿಗೆ ಸೂಚಿಸಿದರು.
ಎಂಜಿನಿಯರಿಂಗ್ ಉಪ ವಿಭಾಗದ ವತಿಯಿಂದ ಮೂಡಲ ಮಾಚಿಕೆರೆ, ದೊಣೆಹಳ್ಳಿ, ಸಿದ್ದಮ್ಮನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಚೆಕ್‌ಡ್ಯಾಂ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಸಮ್ಮುಖದಲ್ಲಿ ತೃಪ್ತಿ ವ್ಯಕ್ತಪಡಿಸಿದರು. ಗುರುಸಿದ್ದಾಪುರ ಸಮೀಪದ ಗೋಶಾಲೆಗೆ ಭೇಟಿ ನೀಡಿದ್ದ ಉಸ್ತುವಾರಿ ಕಾರ್ಯದರ್ಶಿ 132 ಜಾನುವಾರುಗಳ ನಿರ್ವಹಣೆ ಹಾಗೂ ಮೇವು ಪೂರೈಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುತ್ತಿ ಜಂಬೂನಾಥ್, ತಹಶೀಲ್ದಾರ್ ಎಚ್.ಪಿ. ನಾಗರಾಜ್,ಪಿಆರ್‌ಇಡಿ ಇಇ ಪ್ರಕಾಶ್, ಎಇಇ ಎನ್. ಲಿಂಗರಾಜ್, ನೋಡೆಲ್ ಅಧಿಕಾರಿ ಮಹೇಶ್ ಗೌಡ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೇಶವಮೂರ್ತಿ, ಪಿಎಸ್‌ಐ ಆನಂದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.