ಹೊನ್ನಾಳಿ: ರಾಜ್ಯ ಸರ್ಕಾರ ಗುಟ್ಕಾ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದು, ಯಾರೂ ಮಾರಾಟ ಮಾಡಬಾರದು ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ.ಎಂ. ಸರೋಜಾಬಾಯಿ ಹೇಳಿದರು.
ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಸೋಮವಾರ ಆರೋಗ್ಯ ಇಲಾಖೆ ಮತ್ತು ಪಟ್ಟಣ ಪಂಚಾಯ್ತಿ ಅಧಿಕಾರಿಗಳೊಂದಿಗೆ ದಾಳಿ ನಡೆಸಿದ ನಂತರ ಅವರು ಮಾತನಾಡಿದರು. ತಂಬಾಕು ಮತ್ತು ನಿಕೋಟಿನ್ ರಾಸಾಯನಿಕ ಒಳಗೊಂಡ ಗುಟ್ಕಾ ಹಾಗೂ ಪಾನ್‌ಮಸಾಲ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕರುಳು, ಶ್ವಾಸಕೋಶ, ಹೃದಯಕ್ಕೆ ಸಂಬಂಧಿಸಿದ ವಿವಿಧ ರೋಗಗಳು ತಗಲುತ್ತವೆ. ವಸಡಿನ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳು ಹರಡುತ್ತವೆ. ಆದ್ದರಿಂದ ಗುಟ್ಕಾ ಸೇವಿಸದಂತೆ ಸೂಚಿಸಿದರು.
ಗುಟ್ಕಾ ಮತ್ತು ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡಿದರೆ, ರೂ.10ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ವ್ಯಾಪಾರಿಗಳಿಗೆ ಎಚ್ಚರಿಸಿದರು.
ವ್ಯಾಪಾರಿಗಳು ಲಾಭವೊಂದನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಕಾಳಸಂತೆಯಲ್ಲಿ ಗುಟ್ಕಾ ಮಾರಾಟ ಮಾಡಕೂಡದು. ಪ್ರೌಢಶಾಲಾ ಮಕ್ಕಳು ಹಾಗೂ ಕಾಲೇಜು ಯುವಕರು ಹೆಚ್ಚಿನ ಪ್ರಮಾಣದಲ್ಲಿ ಗುಟ್ಕಾ ಸೇವಿಸುತ್ತಿದ್ದಾರೆ. ಆದ್ದರಿಂದ, ಗುಟ್ಕಾ ಮಾರಾಟ ಬೇಡ ಎಂದು ಕಿವಿಮಾತು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆಂಚಪ್ಪ ಆರ್. ಬಂತಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್, ಆಹಾರ ರಕ್ಷಣಾಧಿಕಾರಿ ಕೊಟ್ರೇಶ್, ಪಟ್ಟಣ ಪಂಚಾಯ್ತಿ ಪ್ರಭಾರ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಪಟ್ಟಣದ ಎಲ್ಲಾ ಅಂಗಡಿಗಳಿಗೆ ತೆರಳಿ ಗುಟ್ಕಾ ಮಾರಾಟ ಮಾಡದಂತೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.