ADVERTISEMENT

`ಗುಡಿ ಕೈಗಾರಿಕೆ ಸ್ಥಾಪಿಸಲು ಸಾಲ ಪಡೆಯಿರಿ'

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 4:57 IST
Last Updated 6 ಜುಲೈ 2013, 4:57 IST

ದಾವಣಗೆರೆ: `ಅನಗತ್ಯ ವೆಚ್ಚಕ್ಕೆ ಸಾಲ ಮಾಡದೇ ಗುಡಿ ಕೈಗಾರಿಕೆಗಳ ಸ್ಥಾಪನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಮಾತ್ರ ಬ್ಯಾಂಕ್ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳಲ್ಲಿ ಸಾಲ ಪಡೆಯಿರಿ' ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಲಹೆ ನೀಡಿದರು.

ನಗರದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ಪ್ರಗತಿಬಂಧು ಸ್ವಸಹಾಯ ಸಂಘದ ನೂತನ ಒಕ್ಕೂಟಗಳ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡಿದರು.

ಕರಾವಳಿ ಜಿಲ್ಲೆಗಳಲ್ಲಿ ಪುರುಷರಿಗೆ ಬ್ಯಾಂಕ್‌ಗಳು ಸಾಲ ನೀಡುವುದಿಲ್ಲ. ಸಾಲ ಕೇಳಿದರೆ ಮಹಿಳೆಯರೇ ಸಾಲ ನೀಡುವಮಟ್ಟಕ್ಕೆ ಪ್ರಗತಿ ಸಾಧಿಸಿದ್ದಾರೆ. ಅದಕ್ಕೆ ಕಾರಣ ಗ್ರಾಮಾಭಿವೃದ್ಧಿ ಯೋಜನೆ. ಶೌಚಾಲಯಗಳು ಇಲ್ಲದ ಮನೆಗಳಿಗೆ ನೆರವು ನೀಡಬಾರದು ಎಂದು ತಾಕೀತು ಮಾಡಿದರು.

ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, `ಸರ್ಕಾರ ಮಾಡುವ ಕೆಲಸವನ್ನು ಸ್ವಯಂಸೇವಾ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಶೌಚಾಲಯ ನಿರ್ಮಾಣ, ವೃದ್ಧಾಪ್ಯ ವೇತನ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದೆ. ಜಿಲ್ಲೆಯ ಮಹಿಳೆಯರ ಪ್ರಗತಿಗೆ ಶ್ರಮಿಸುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಗೆ ಸಹಾಯ ನೀಡಲಾಗುವುದು' ಎಂದು ಹೇಳಿದರು.

ಯೋಜನೆ ಜ್ಲ್ಲಿಲಾ ಘಟಕದ ನಿರ್ದೇಶಕ ಜೆ.ಚಂದ್ರಶೇಖರ್ ಮಾತನಾಡಿ, ಸ್ವಉದ್ಯೋಗ, ಕೃಷಿ, ಶಿಕ್ಷಣ, ಮಹಿಳಾ ಸಬಲೀಕರಣಕ್ಕಾಗಿ ರೂ 37 ಕೋಟಿ ಸಾಲ ನೀಡಲಾಗಿದೆ ಎಂದು ಹೇಳಿದರು.

ಪಾಲಿಕೆ ಸದಸ್ಯರಾದ ದಿನೇಶ್ ಕೆ.ಶೆಟ್ಟಿ, ರೇಖಾ ನಾಗರಾಜ್, ಶಿವನಹಳ್ಳಿ ರಮೇಶ್, ಎನ್.ಅರುಣಾಚಲ ಹಾಗೂ ಯೋಜನೆಯ ಇತರ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.