ADVERTISEMENT

`ಗೃಹರಕ್ಷಕರ ನೇಮಕಾತಿ ನಿಯಮ ಸರಳವಾಗಲಿ'

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 6:29 IST
Last Updated 15 ಡಿಸೆಂಬರ್ 2012, 6:29 IST
ದಾವಣಗೆರೆಯಲ್ಲಿ ಶುಕ್ರವಾರ ಅಖಿಲಭಾರತ ಗೃಹರಕ್ಷಕ ದಳ ದಿನಾಚರಣೆ ಸಮಾರಂಭದಲ್ಲಿ ಗೃಹರಕ್ಷಕ ಸಿಬ್ಬಂದಿ ಪ್ರಮಾಣವಚನ ಸ್ವೀಕರಿಸಿದರು.
ದಾವಣಗೆರೆಯಲ್ಲಿ ಶುಕ್ರವಾರ ಅಖಿಲಭಾರತ ಗೃಹರಕ್ಷಕ ದಳ ದಿನಾಚರಣೆ ಸಮಾರಂಭದಲ್ಲಿ ಗೃಹರಕ್ಷಕ ಸಿಬ್ಬಂದಿ ಪ್ರಮಾಣವಚನ ಸ್ವೀಕರಿಸಿದರು.   

ದಾವಣಗೆರೆ: ಗೃಹರಕ್ಷಕ ದಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಸೇರಬೇಕಾದರೆ ನೇಮಕಾತಿ ನಿಯಮಾವಳಿ ಸರಳಗೊಳಿಸಬೇಕು ಎಂದು ದಳದ ನಿವೃತ್ತ ಸಮಾದೇಷ್ಟ ಮಹಾಲಿಂಗಪ್ಪ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ  ಶುಕ್ರವಾರ ಹಮ್ಮಿಕೊಂಡಿದ್ದ `ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ -2012'ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಗೃಹರಕ್ಷಕ ದಳಕ್ಕೆ ಇನ್ನಷ್ಟು ಹೆಚ್ಚಿನ ನೇಮಕಾತಿ ಆಗಬೇಕು. ವಿಪತ್ತು ನಿರ್ವಹಣೆ, ಕಾನೂನು-ಸುವ್ಯವಸ್ಥೆ ಪಾಲನೆ ಸಂದರ್ಭದಲ್ಲಿ ಗೃಹರಕ್ಷಕರ ಪಾತ್ರ ಮಹತ್ತರವಾದದ್ದು. ನಿಯಮಾವಳಿ ಬದಲಾಯಿಸಿದರೆ ಹೆಚ್ಚು ಸಂಖ್ಯೆಯಲ್ಲಿ ಸಿಬ್ಬಂದಿ ದಳಕ್ಕೆ ಸೇರುತ್ತಾರೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಗೃಹರಕ್ಷಕ ದಳವು ದೇಶ ಸೇವೆಗೆ ಕಂಕಣಬದ್ಧವಾಗಿರಬೇಕು. ಇದೇ ದಳದಲ್ಲಿ ಸೇವೆ ಸಲ್ಲಿಸುತ್ತಾ ಹುತಾತ್ಮರಾದವರು ಅನೇಕ ಮಂದಿ ಇದ್ದಾರೆ. ನಿಸ್ವಾರ್ಥ ಸೇವೆ ಸಲ್ಲಿಸುವ ದೃಷ್ಟಿಯಿಂದ ಯುವಜನರು ಹೆಚ್ಚು ಸಂಖ್ಯೆಯಲ್ಲಿ ಗೃಹರಕ್ಷಕ ದಳಕ್ಕೆ ಸೇರಬೇಕು ಎಂದು ಕೋರಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್. ಇಂದುಮತಿ ಮಾತನಾಡಿ, ಇಂದು ನಿಸ್ವಾರ್ಥವಾಗಿ ಸೇವೆ ಸಲ್ಲಿಸುವವರ ಪ್ರಮಾಣ ಕಡಿಮೆಯಿದೆ. ಸೇವಾ ಮನೋಭಾವ ಎಲ್ಲರಲ್ಲಿಯೂ ಬರಬೇಕು. ಆಗ ಗೃಹರಕ್ಷಕ ದಳದ ದಿನಾಚರಣೆ ಸಾರ್ಥಕವಾಗುತ್ತದೆ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ. ಹೇಮಚಂದ್ರ ಮಾತನಾಡಿ, ದೇಶದ ಮೇಲೆ ಚೀನಾ ದಾಳಿಯ ನಂತರ ಗೃಹರಕ್ಷಕ ದಳದ ಸೇವೆಗೆ ಮಹತ್ವ ಬಂದಿತು. ಗೃಹರಕ್ಷಕ ದಳ ತಾಲ್ಲೂಕುಮಟ್ಟದಲ್ಲಿ ಹೆಚ್ಚು ಬಲಗೊಳ್ಳಬೇಕು. ಧನಾತ್ಮಕ ಚಿಂತನೆ ಇಟ್ಟುಕೊಂಡು ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಭೂರಾಂ, ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಬಿ.ಎಚ್. ವೀರಪ್ಪ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಸಿ. ಬಸವಣ್ಣ, ನಿವೃತ್ತ ಡಿವೈಎಸ್‌ಪಿ ಕೆ.ಪಿ. ಚಂದ್ರಪ್ಪ, ಹಾವೇರಿ ಜಿಲ್ಲಾ ಸಮಾದೇಷ್ಟರಾದ ಎಸ್.ಎಸ್. ಬೇವಿನಮರದ, ಸೆಕೆಂಡ್-ಇನ್-ಕಮಾಂಡೆಂಟ್ ಜಯಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.