ADVERTISEMENT

ಚರಂಡಿ ಆಧುನೀಕರಣ ಕಾಮಗಾರಿಗೆ ಚಾಲನೆ

ದಾವಣಗೆರೆ: ಸ್ಮಾರ್ಟ್‌ ಸಿಟಿ ಯೋಜನೆಯಡಿ ₹ 64 ಕೋಟಿ ವೆಚ್ಚದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 7:02 IST
Last Updated 16 ಜೂನ್ 2018, 7:02 IST
ಚರಂಡಿ ಆಧುನೀಕರಣ ಕಾಮಗಾರಿಗೆ ಚಾಲನೆ
ಚರಂಡಿ ಆಧುನೀಕರಣ ಕಾಮಗಾರಿಗೆ ಚಾಲನೆ   

ದಾವಣಗೆರೆ: ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಒಟ್ಟು ₹ 64 ಕೋಟಿ ವೆಚ್ಚದಲ್ಲಿ ಆರು ಕಡೆ ಮಳೆ ನೀರಿನ ಚರಂಡಿ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಗುಣಮಟ್ಟದಿಂದ ಕೆಲಸ ಮಾಡಿಸಲಾಗುವುದು’ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಮಾಗನಹಳ್ಳಿ ರಸ್ತೆಯ ಮೀನು ಮಾರುಕಟ್ಟೆ ಬಳಿ ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಚರಂಡಿ ಆಧುನೀಕರಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಎಷ್ಟು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೀರಿ?’ ಎಂದು ಶಾಸಕರು ಗುತ್ತಿಗೆದಾರರನ್ನು ಕೇಳಿದಾಗ, ‘ಆರು ತಿಂಗಳು ಬೇಕು’ ಎಂದು ರಾಗ ಎಳೆದರು.

ADVERTISEMENT

ಇದರಿಂದ ಸಿಟ್ಟಿಗೆದ್ದ ಶಾಮನೂರು, ‘ನೀನೇನು ಮನುಷ್ಯನಾ? ಮಳೆಗಾಲದಲ್ಲಿ ಜನ ತೊಂದರೆ ಅನುಭವಿಸುತ್ತಾರೆ. ನೀನು ಹೇಳುತ್ತಿರುವುದು ಶಿವಪೂಜೆಯಲ್ಲಿ ಕರಡಿಗೆ ಬಿಟ್ಟು ಬಂದ ಸ್ಥಿತಿಯಂತಾಯಿತು. ಮುಂದಿನ ಎರಡು– ಮೂರು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು’ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

‘ಈ ಭಾಗದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ಸೊಳ್ಳೆಯ ಕಾಟ ಹೆಚ್ಚಿದೆ. ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರದಲ್ಲೇ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ಈ ಪ್ರದೇಶವನ್ನು ಸ್ವಚ್ಛಗೊಳಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.

ಮಂಡಕ್ಕಿ ಭಟ್ಟಿ ಸ್ಥಳಾಂತರ: ‘ಮಂಡಕ್ಕಿ ಭಟ್ಟಿಯನ್ನು ಸ್ಥಳಾಂತರ ಮಾಡಲು ಪರ್ಯಾಯ ಜಾಗಕ್ಕಾಗಿ ಹುಡುಕಾಡುತ್ತಿದ್ದೇವೆ. ಸರ್ಕಾರ ನಿಗದಿಪಡಿಸುವ ₹ 10 ಲಕ್ಷಕ್ಕೆ ಜಾಗ ಸಿಗುವುದಿಲ್ಲ. ಕಾಂಗ್ರೆಸ್‌– ಜೆಡಿಎಸ್‌ ನೇತೃತ್ವದ ಹೊಸ ಸರ್ಕಾರ ಬಂದಿದೆ. ಸರ್ಕಾರ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸಿ ಜಾಗ ಕೊಡಲು ವ್ಯವಸ್ಥೆ ಮಾಡಬೇಕಾಗಿದೆ. ಜಮೀನು ಸಿಕ್ಕ ತಕ್ಷಣವೇ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಶಾಮನೂರು, ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕಸಾಯಿಖಾನೆ ಆಧುನೀಕರಣ ಮಾಡಬೇಕಾಗಿದೆ. ಆ ಕೆಲಸ ನಡೆದರೆ ತನ್ನಿಂದ ತಾನಾಗಿಯೇ ಈ ಭಾಗದ ಚರಂಡಿಗಳು ಸ್ವಚ್ಛವಾಗಲಿದೆ’ ಎಂದೂ ಅವರು ಹೇಳಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಕೆ. ಚಮನ್‌ಸಾಬ್‌, ಪಾಲಿಕೆ ಸದಸ್ಯರಾದ ಪರಸಪ್ಪ ಬಿ., ಎಂ. ಹಾಲೇಶ್‌, ದಿನೇಶ್‌ ಕೆ. ಶೆಟ್ಟಿ, ಪಿ.ಎನ್‌. ಚಂದ್ರಶೇಖರ್‌, ಬಸಪ್ಪ, ಜಿ. ರಾಜಶೇಖರ್‌ ಹಾಗೂ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.

ತರಾಟೆಗೆ ತೆಗೆದುಕೊಂಡ ಸ್ಥಳೀಯರು

ಸ್ಮಾರ್ಟ್‌ ಸಿಟಿ ಕಾಮಗಾರಿ ಉದ್ಘಾಟಿಸಿ ಶಾಮನೂರು ಅವರು ತೆರಳಿದ ಬಳಿಕ ಪಾಲಿಕೆಯ 5ನೇ ವಾರ್ಡ್‌ ಸದಸ್ಯ ಪರಸಪ್ಪ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.

‘ನಾಲ್ಕೈದು ತಿಂಗಳ ಬಳಿಕ ನಿಮ್ಮನ್ನು ನೋಡುತ್ತಿದ್ದೇವೆ. ಚರಂಡಿಯಲ್ಲಿ ಬಿದ್ದು ಮಗು ಸತ್ತಾಗಲೂ ನೀವು ಇಲ್ಲಿಗೆ ಬಂದಿಲ್ಲ. ಶಾಸಕ ಶಾಮನೂರು ಬಂದು ₹ 50 ಸಾವಿರ ಪರಿಹಾರ ನೀಡಿ ಹೋದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಚರಂಡಿಯನ್ನು ಮುಚ್ಚಿಲ್ಲ. ಬೀದಿ ದೀಪ ಇಲ್ಲದಿರುವುದರಿಂದ ರಾತ್ರಿ ವೇಳೆ ಸಂಚರಿಸಲು ಭಯವಾಗುತ್ತಿದೆ. ಕಸವನ್ನು ಒಯ್ಯುವ ವಾಹನ ಇಲ್ಲಿಗೆ ಬರುತ್ತಿಲ್ಲ. ನಾಯಿ, ಹಂದಿಯ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಹೊರಗೆ ಬಂದು ಆಟವಾಡಲೂ ಆಗದ ಸ್ಥಿತಿ ನಿರ್ಮಾಣಗೊಂಡಿದೆ. ನಿಮ್ಮ ಮಕ್ಕಳು ಇಲ್ಲಿಗೆ ಬಂದರೂ ನಾವು ಅವರನ್ನು ಮನೆಗೆ ಕರೆದು ಸತ್ಕರಿಸುವಂತೆ ಕೆಲಸ ಮಾಡಿ’ ಎಂದು ಸ್ಥಳೀಯರಾದ ಮಹಮ್ಮದ್‌ ಶಫಿ ಪರಸಪ್ಪ ಅವರ ಎದುರು ಅಸಮಾಧಾನವನ್ನು ತೋಡಿಕೊಂಡರು.

ಚರಂಡಿ ಕಾಮಗಾರಿ ವಿವರ

 ಕೊಂಡಜ್ಜಿ ರಸ್ತೆ: 4,585 ಮೀಟರ್‌ ಉದ್ದ; ₹ 16.04 ಕೋಟಿ ವೆಚ್ಚ

ಕೊಂಡಜ್ಜಿ ರಸ್ತೆ: 1,850 ಮೀಟರ್‌ ಉದ್ದ; ₹ 14.98 ಕೋಟಿ ವೆಚ್ಚ

ಬಾಷಾನಗರ ಮುಖ್ಯ ರಸ್ತೆ: 2,579 ಮೀಟರ್‌ ಉದ್ದ; ₹ 4.89 ಕೋಟಿ   ವೆಚ್ಚ

ಕೆ.ಆರ್‌. ರಸ್ತೆ, ರಜಾಉಲ್ಲಾ ಮುಸ್ತಫಾನಗರ: 2,861 ಮೀಟರ್‌ ಉದ್ದ; ₹ 5.59 ಕೋಟಿ ವೆಚ್ಚ

ಎಸ್‌.ಪಿ.ಎಸ್‌ ನಗರ: 92.36 ಮೀಟರ್‌ ಉದ್ದ; ₹ 5.58 ಕೋಟಿ ವೆಚ್ಚ

ಮಾಗನಹಳ್ಳಿ ಮುಖ್ಯ ರಸ್ತೆ: 2,628 ಮೀಟರ್‌ ಉದ್ದ; ₹ 9.88 ಕೋಟಿ   ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.