ADVERTISEMENT

ಚುನಾವಣೆ: ತಿಮ್ಮಾರೆಡ್ಡಿ ಎಪಿಎಂಸಿ ಅಧ್ಯಕ್ಷ

ನೇರ ಹಣಾಹಣಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್, ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ್‌ಬಾಬು ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 6:52 IST
Last Updated 15 ಫೆಬ್ರುವರಿ 2017, 6:52 IST
ಚಿತ್ರದುರ್ಗದ ಎಪಿಎಂಸಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಜಿ.ಬಿ.ತಿಮ್ಮಾರೆಡ್ಡಿ ಅಧ್ಯಕ್ಷರಾಗಿ, ಜಿ.ಸುರೇಶ್‌ಬಾಬು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಸೇರಿದಂತೆ ಇತರರು ಇದ್ದರು.
ಚಿತ್ರದುರ್ಗದ ಎಪಿಎಂಸಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಜಿ.ಬಿ.ತಿಮ್ಮಾರೆಡ್ಡಿ ಅಧ್ಯಕ್ಷರಾಗಿ, ಜಿ.ಸುರೇಶ್‌ಬಾಬು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಸೇರಿದಂತೆ ಇತರರು ಇದ್ದರು.   
ಚಿತ್ರದುರ್ಗ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಿ.ಬಿ.ತಿಮ್ಮಾರೆಡ್ಡಿ ಅಧ್ಯಕ್ಷರಾಗಿ, ಜಿ.ಸುರೇಶ್‌ಬಾಬು ಉಪಾಧ್ಯಕ್ಷರಾಗಿ  ಆಯ್ಕೆಯಾದರು.
 
ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾನಂಗಿ ಕ್ಷೇತ್ರದ ಡಿ.ಎಸ್.ಶಶಿಧರ ಹಾಗೂ ಚಿಕ್ಕಗೊಂಡನ ಹಳ್ಳಿ ಕ್ಷೇತ್ರದ ಜಿ.ಬಿ.ತಿಮ್ಮಾರೆಡ್ಡಿ ನಾಮಪತ್ರ ಸಲ್ಲಿಸಿದ್ದರು. 
 
ಅಧ್ಯಕ್ಷ ಸ್ಥಾನಕ್ಕೆ ಈ ಇಬ್ಬರ ನಡುವೆ ನೇರ ಹಣಾಹಣಿ ನಡೆದಿದ್ದು, ಒಂಬತ್ತು ಮತ ಪಡೆದ ತಿಮ್ಮಾರೆಡ್ಡಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿ ಡಿ.ಎಸ್.ಶಶಿಧರ ಏಳು ಮತ ಪಡೆದು ಪರಾಭವಗೊಂಡರು.
 
ಉಪಾಧ್ಯಕ್ಷ ಸ್ಥಾನಕ್ಕೆ ಯಳಗೋಡು ಕ್ಷೇತ್ರದ ಜಿ.ಸುರೇಶ್‌ಬಾಬು ಹೊರತುಪಡಿಸಿ ಬೇರೆ ಯಾವ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸದ ಕಾರಣ ಅಂತಿಮವಾಗಿ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಯಿತು. 
 
ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಜಿ.ಬಿ.ತಿಮ್ಮಾರೆಡ್ಡಿ, ಡಿ.ಎಸ್.ಶಶಿಧರ, ಉಪಾಧ್ಯಕ್ಷ ಸ್ಥಾನದ ಜಿ.ಸುರೇಶ್‌ಬಾಬು, ನಿರ್ದೇಶಕರಾದ ಚಿತ್ರದುರ್ಗ ಕ್ಷೇತ್ರದ ಬಿ.ಜಯಪ್ಪ, ಭರಮಸಾಗರ ಕ್ಷೇತ್ರದ ಎಂ.ಗೀತಾ ಡಿ.ಎಸ್.ರುದ್ರಮುನಿ, ತುರುವನೂರು ಕ್ಷೇತ್ರದ ಬಿ.ಕಮಲಮ್ಮ, ದ್ಯಾಮವ್ವನಹಳ್ಳಿ ಕ್ಷೇತ್ರದ ಡಿ.ಟಿ. ರಾಜೇಂದ್ರರೆಡ್ಡಿ, ದೊಡ್ಡಸಿದ್ದವ್ವನಹಳ್ಳಿ ಕ್ಷೇತ್ರದ ರಾಜಣ್ಣ, ಗೊಡಬನಹಾಳು ಕ್ಷೇತ್ರದ ಎಂ.ಸಿ.ಸಿದ್ದಲಿಂಗಪ್ಪ, ಭೀಮಸಮುದ್ರ ಕ್ಷೇತ್ರದ ಬಿ.ಎಸ್. ವಿಶ್ವನಾಥಪ್ಪ, ಸಿರಿಗೆರೆ ಕ್ಷೇತ್ರದ ಅನ್ನಪೂರ್ಣಮ್ಮ, ವರ್ತಕರ ಕ್ಷೇತ್ರದ ಎಸ್.ವಿ.ನಾಗರಾಜಪ್ಪ, ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರದ ಜಿ.ಆರ್.ಪುರುಷೋತ್ತಮ ಹಾಗೂ ನಾಮ ನಿರ್ದೇಶಿತ ಸದಸ್ಯರಾದ ತಿಪ್ಪೇಸ್ವಾಮಿ, ದಾಸಪ್ಪ, ಲೀಲಾವತಿ ಸೇರಿ ಒಟ್ಟು 16 ಸದಸ್ಯರು ಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಚುನಾವಣಾ ಅಧಿಕಾರಿಯೂ ಆದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಅವರು ಬ್ಯಾಲೆಟ್ ನಮೂನೆಯ ಮೂಲಕ ಗುಪ್ತ ಮತದಾನ ನಡೆಸಿದರು. ಎಪಿಎಂಸಿ ಕಾರ್ಯದರ್ಶಿ ಆರ್.ಎಂ.ಪಾಟೀಲ್ ಇದ್ದರು.
 
ರೈತರ ಸಮಸ್ಯೆಗಳಿಗೆ ಸ್ಪಂದನ: ನೂತನ ಉಪಾಧ್ಯಕ್ಷ ಜಿ.ಸುರೇಶ್‌ಬಾಬು ಮಾಧ್ಯಮದವರೊಂದಿಗೆ ಮಾತನಾಡಿ, ಎಪಿಎಂಸಿ ನೀತಿಗಳು ರೈತರಿಗೆ ಪ್ರಯೋಜನ ಆಗಿಲ್ಲ. ಆದ ಕಾರಣ ಮೊದಲು ಇದನ್ನು ಸರಿಪಡಿಸಲು ಪ್ರಯತ್ನಿಸುತ್ತೇನೆ. ಮಾರುಕಟ್ಟೆ ವ್ಯವಸ್ಥೆಯನ್ನು ಬದಲಾಯಿಸುತ್ತೇನೆ ಎಂದು ಭರವಸೆ ನೀಡಿದರು. 
 
ನಾನು ರೈತರ ಪರವಾಗಿ ಕಳೆದ 3 ದಶಕಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನೀರಿಗಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದೇನೆ. ರೈತ ಭವನ ಹಾಗೂ ರೈತರಿಗೆ ವಿಶ್ರಾಂತಿ ಗೃಹ ನಿರ್ಮಾಣ ಮಾಡುವುದು ನನ್ನ ಮೊದಲ ಆದ್ಯತೆ ಎಂದು ಆಶ್ವಾಸನೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.