ADVERTISEMENT

ಜಗಳೂರು ತಾಲ್ಲೂಕು ಅಭಿವೃದ್ಧಿಗೆ ರೂ 40 ಕೋಟಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 9:00 IST
Last Updated 14 ಫೆಬ್ರುವರಿ 2011, 9:00 IST

ಜಗಳೂರು: ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ  ್ಙ  40 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಪ್ರಸ್ತುತ ರೂ 12 ಕೋಟಿ ವೆಚ್ಚದ ಕಾಮಗಾರಿಗಳು ಮತ್ತು 5 ಸಾವಿರ ಮನೆಗಳಿಗೆ ಮಂಜೂರಾತಿ ಸಿಕ್ಕಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

 ಜಿಲ್ಲಾ ಪಂಚಾಯ್ತಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಭಾನುವಾರ ನಡೆದ ತಾಲ್ಲೂಕಿನ ಕಲ್ಲೇದೇವಪುರ ಗ್ರಾಮದ ಕಲ್ಲೇಶ್ವರ ದೇವಸ್ಥಾನದ ರಾಜಗೋಪುರ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿರುವ ನಿರ್ಗತಿಕರು ಹಾಗೂ ವಸತಿರಹಿತರಿಗೆ 5 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ. ರಸ್ತೆ, ಸಮುದಾಯ ಭವನ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಬೇಕು ಎಂದು ಎಸ್.ವಿ. ರಾಮಚಂದ್ರ ಅವರು ಇಟ್ಟಿದ್ದ ಬೇಡಿಕೆಯನ್ನು ಸರ್ಕಾರ ಬಜೆಟ್‌ನಲ್ಲಿ  ಸೇರ್ಪಡೆಗೊಳಿಸುವ ಮೂಲಕ ಈಡೇರಿಸಲಿದೆ ಎಂದು ಸಂಸದರು ಸ್ಪಷ್ಟಪಡಿಸಿದರು.

‘ರೈತರ ಹಿತದೃಷ್ಟಿಯಿಂದ  ಶೇ. 1ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಪಟ್ಟಣಕ್ಕೆ ್ಙ 20 ಕೋಟಿ ವೆಚ್ಚದಲ್ಲಿ  ಸೂಳೆಕೆರೆಯಿಂದ ಕುಡಿಯುವ ನೀರು ಪೂರೈಕೆ. ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆ ಸೇರಿದಂತೆ ಮಾಜಿ ಶಾಸಕ ಗುರುಸಿದ್ದನಗೌಡ ಅವರ ಅವಧಿಯಲ್ಲಿ ತಾಲ್ಲೂಕಿನಲ್ಲಿ  ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ  ಎಂದು ಸಿದ್ದೇಶ್ವರ ಹೇಳಿದರು.

ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್  ಅಧ್ಯಕ್ಷ ಟಿ. ಗುರುಸಿದ್ದನಗೌಡ ಮಾತನಾಡಿ, 11ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಗ್ರಾಮದ ಕಲ್ಲೇಶ್ವರ ದೇವಸ್ಥಾನ ಐತಿಹಾಸಿಕ ಮಹತ್ವ ಪಡೆದಿದ್ದು,  ದೇವಸ್ಥಾನದ ವಾಸ್ತುಶಿಲ್ಪ ರಾಜ್ಯದಲ್ಲೇ ಅಪರೂಪವಾದದ್ದು ಎಂದರು.

ಈ ಸಂದರ್ಭದಲ್ಲಿ ರಾಜಗೋಪುರ ನಿರ್ಮಾಣಕ್ಕೆ ಟಿ. ಗುರುಸಿದ್ದನಗೌಡ ಅವರು ವೈಯಕ್ತಿಕವಾಗಿ ರೂ 1ಲಕ್ಷ ದೇಣಿಗೆ ನೀಡಿದರು.

ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು. ತಾಲ್ಲೂಕಿನ ಕಮಂಡಲಗುಂದಿ, ಹಿರೇಮಲ್ಲನಹೊಳೆ, ಹುಚ್ಚವ್ವನಹಳ್ಳಿ, ಅಣಬೂರು, ಹಾಲೇಹಳ್ಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

 ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಎಸ್.ವಿ. ರಾಮಚಂದ್ರ, ಜಿ.ಪಂ. ಸದಸ್ಯ ಕೆ.ಪಿ. ಪಾಲಯ್ಯ, ತಾ.ಪಂ. ಸದಸ್ಯೆ ಶಾಂತಮ್ಮ, ಗ್ರಾ.ಪಂ. ಅಧ್ಯಕ್ಷೆ ಓಂಕಾರಮ್ಮ ನಿಜಲಿಂಗಪ್ಪ, ಎಚ್.ಸಿ. ಮಹೇಶ್, ಶಿವಕುಮಾರಯ್ಯ. ಮಂಜುನಾಥ್, ಸಣ್ಣಸೂರಯ್ಯ,  ಟಿ.ಜಿ. ಪವನ್, ಸಿಪಿಐ ಶಿವಕುಮಾರ್, ಪಿಎಸ್‌ಐ ರಘುನಾಥ್, ಭೂಸೇನಾ ನಿಗಮದ ಉಮೇಶ್ ಪಾಟೀಲ್, ರುದ್ರಪ್ಪ ಹಾಜರಿದ್ದರು.

ಪಕ್ಷ ತ್ಯಜಿಸಿದ್ದಕ್ಕೆ ಅನುದಾನ !

 ಕಲ್ಲೇದೇವಪುರ  ಗ್ರಾಮದ ಕಲ್ಲೇಶ್ವರ ದೇವಸ್ಥಾನದ ರಾಜಗೋಪುರ ಶಂಕುಸ್ಥಾಪನಾ ಸಮಾರಂಭ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ಪರಸ್ಪರ ಮಾತಿನ ಪ್ರಹಾರಕ್ಕೆ ವೇದಿಕೆಯಾಯಿತು.

  ಕಾಂಗ್ರೆಸ್‌ನ  ಜಿ.ಪಂ. ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ. ‘ಎಸ್.ವಿ. ರಾಮಚಂದ್ರ ಅವರು ಶಾಸಕ ಸ್ಥಾನಕ್ಕೆ  ರಾಜೀನಾಮೆ ನೀಡಿ  ಬಿಜೆಪಿ ಸೇರಿದ್ದಕ್ಕೆ ತಾಲ್ಲೂಕಿಗೆ 5 ಸಾವಿರ ಮನೆ, ಕೋಟಿಗಟ್ಟಲೆ ಅನುದಾನ ಹಾಗೂ ನೀರಾವರಿ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದೆ ಎನ್ನಲಾಗುತ್ತಿದೆ. ಇದು ಎಷ್ಟು ಸಾಕಾರಗೊಳ್ಳುತ್ತೋ ಗೊತ್ತಿಲ್ಲ. ಬರಲಿರುವ ಉಪ ಚುನಾವಣೆಯಲ್ಲಿ ಯಾರದೋ ಲಾಭಕ್ಕಾಗಿ ಜನರನ್ನು ದಿಕ್ಕು ತಪ್ಪಿಸುವುದು ಬೇಡ. ನೀರಾವರಿಗಾಗಿ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಲಾಗಿದೆ. ಆದರೆ ಈಗ ರಾಮಚಂದ್ರ ಅವರ ಬಿಜೆಪಿ ಸೇರ್ಪಡೆಯಿಂದ ಇದೆಲ್ಲಾ ಸಾಧ್ಯವಾಗುತ್ತಿದೆ ಎನ್ನುವುದು ಸರಿಯಲ್ಲ’ ಎಂದು ಕಟಕಿದರು.

ಪಾಲಯ್ಯ ಅವರ ಮಾತಿನಿಂದ ಭಾವೋದ್ವೇಗಕ್ಕೆ ಒಳಗಾದ  ಎಸ್.ವಿ. ರಾಮಚಂದ್ರ ವೇದಿಕೆಯಲ್ಲೇ ಎದ್ದು ನಿಂತು ‘ನಾನು ಶಾಸಕ ಸ್ಥಾನ ತೊರೆದಿದ್ದರಿಂದಲೇ ತಾಲ್ಲೂಕಿಗೆ 5 ಸಾವಿರ ಮನೆ ಸೇರಿದಂತೆ  ಕೋಟಿಗಟ್ಟಲೆ ಯೋಜನೆಗಳ ಲಾಭವಾಗಿದೆ. ವಿಧಾನಸಭಾ ಉಪ ಚುನಾವಣೆಯಲ್ಲಿ ನನಗೆ ಗೆಲುವಾಗಲಿ ಎಂದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಿಮಾನದಿಂದ ಕ್ಷೇತ್ರಕ್ಕೆ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ’  ಎಂದು ತಾರಕ ಸ್ವರದಲ್ಲಿ  ಪ್ರತ್ಯುತ್ತರ ನೀಡಿದರು.

‘ಭಾನುವಾರ ಹಲವೆಡೆ ನಡೆದ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಆರೋಪಿಸಿ ಅಣಬೂರು ಜಿ.ಪಂ. ಸದಸ್ಯೆ ನೇತ್ರಾವತಿ ಕೃಷ್ಣಮೂರ್ತಿ ಹಾಗೂ ತಾ.ಪಂ ಸದಸ್ಯೆಲಕ್ಷ್ಮೀ ಬಾಯಿ ಸಮಾರಂಭವನ್ನು ಬಹಿಷ್ಕರಿಸಿದರು.

 ಭೂಸೇನಾ ನಿಗಮದ ಅಧಿಕಾರಿಗಳು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿದ್ದು, ಕ್ಷೇತ್ರದ ಜನಪ್ರತಿನಿಧಿಯಾದ ತಮ್ಮನ್ನು ಕಡೆಗಣಿಸಲಾಗುತ್ತಿದೆ. ಹೀಗೇ ಮುಂದುವರಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಜಿ.ಪಂ. ಸದಸ್ಯೆ ನೇತ್ರಾವತಿ ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.