ADVERTISEMENT

ಜಗಳೂರು: ಬರದ ನಡುವೆಯೂ ಸಂಭ್ರಮದ ದೀಪಾವಳಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 9:15 IST
Last Updated 28 ಅಕ್ಟೋಬರ್ 2011, 9:15 IST

ಜಗಳೂರು: ತಾಲ್ಲೂಕಿನಲ್ಲಿ `ಬರ~ ಪರಿಸ್ಥಿತಿಯ ನಡುವೆಯೂ ದೀಪಾವಳಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ವಿಶೇಷವಾಗಿ ಲಂಬಾಣಿ ತಾಂಡಾಗಳಲ್ಲಿ ಯುವತಿಯರು ಸಂಭ್ರಮ, ಸಡಗರಗಳಿಂದ  ಸಾಮೂಹಿಕ ನೃತ್ಯ ಮತ್ತು ಜನಪದ ಹಾಡುಗಳನ್ನು ಹಾಡುವ ಮೂಲಕ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.

ಹೊಟ್ಟೆಪಾಡಿಗಾಗಿ ದೂರದ ಬೆಂಗಳೂರು, ಮಂಡ್ಯ, ಮೈಸೂರು, ಮಲೆನಾಡಿನ  ಕಾಫಿ ಸೀಮೆಗೆ `ಗುಳೆ~ ಹೋಗುವ ಲಂಬಾಣಿ ಸಮುದಾಯದವರು ದೀಪಾವಳಿ ಹಾಗೂ ಯುಗಾದಿ ಸಂದರ್ಭದಲ್ಲಿ ತಮ್ಮ  ತಾಂಡಾಗಳಿಗೆ ಮರಳಿ, ಬಂಧು, ಬಳಗದೊಂದಿಗೆ ಸೇರಿ ಹಬ್ಬದಲ್ಲಿ ನೃತ್ಯ, ಹಾಡುಹಸೆಯ ಮೂಲಕ ತಮ್ಮ ಎಲ್ಲಾ ನೋವನ್ನು ಮರೆತು ಸಂಭ್ರಮಿಸುತ್ತಾರೆ.

ತಾಲ್ಲೂಕಿನ ಬ್ಯಾಟಗಾರನಹಳ್ಳಿ, ಗಾಂಧಿನಗರ, ಜ್ಯೋತಿಪುರ ತಾಂಡಾ, ವೆಂಕಟೇಶಪುರ ತಾಂಡಾ, ಕೊರಟಿಕೆರೆ ತಾಂಡಾ ಸೇರಿದಂತೆ ಎಲ್ಲಾ ತಾಂಡಗಳಲ್ಲಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ತಲೆಯ ಮೇಲೆ ಹೂವಿನ ಪುಟ್ಟಿ ಹೊತ್ತ ಲಂಬಾಣಿ ಯುವತಿಯರು ತಾಂಡಕ್ಕೆ ಹೊಂದಿಕೊಂಡಿರುವ ಗುಡ್ಡ ಹಾಗೂ ಅರಣ್ಯ ಪ್ರದೇಶದಲ್ಲಿ ಜನಾಂಗದ ಸಾಮೂಹಿಕ `ದವಾಳಿ~ ನೃತ್ಯ ಮಾಡುತ್ತಾ, ಜಾನಪದ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸಿದರು.

ಬ್ಯಾಟಗಾರನಹಳ್ಳಿ, ಗಾಂಧಿನಗರ ಹಾಗೂ ಜ್ಯೋತಿಪುರ ತಾಂಡಾದ ನೂರಾರು ಹದಿಹರೆಯದ ಯುವತಿಯರು ಗುರುವಾರ ಬೆಳಿಗ್ಗೆ ಗಾಂಧಿನಗರ ತಾಂಡಾದ ಸಮೀಪ ಇರುವ ಅರಣ್ಯ ಪ್ರದೇಶದಲ್ಲಿ `ವರ್ಷದಾಡೇರ್ ಕೋರ್ ದವಾಳಿ ಲೋಕ್‌ತೋನ್ ಮೇರಾ~ (ವರ್ಷಕ್ಕೊಮ್ಮೆ ಬರುವ ದೀಪಾವಳಿ ಎಲ್ಲರಿಗೂ ಆರೋಗ್ಯ, ಸಮೃದ್ಧಿ ತರಲಿ) ಎಂಬ ಜನಪದ ಆಶಯದ ಹಾಡುಗಳನ್ನು ಹಾಡುತ್ತಾ, ಲಯಬದ್ಧವಾಗಿ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.