ದಾವಣಗೆರೆ: ಜನನಾಂಗವೇ ಇಲ್ಲದ ಮಗುವೊಂದು ನಗರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಜನಿಸಿದ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗ ಮೂಲದ ಶಿಕ್ಷಕ ದಂಪತಿಗೆ ಜನಿಸಿದ ಈ ಮಗು ಸುಂದರವಾಗಿದ್ದು, ಆರೋಗ್ಯಪೂರ್ಣವಾಗಿದೆ. ಗಂಡು ಮಗುವಿನ ಲಕ್ಷಣಗಳನ್ನು ಒಳಗೊಂಡಿದೆ. ಆದರೆ, ಮಗುವಿಗೆ ಎರಡು ವೃಷಣ ಮಾತ್ರ ಇದ್ದು, ಜನನಾಂಗ ಇಲ್ಲ. ಆದರೂ ಮೂತ್ರ ಗುದದ್ವಾರದ ಮೂಲಕ ಮಾಡುತ್ತಾನೆ.
ದಂಪತಿಗೆ ಅದು ಎರಡನೇ ಮಗುವಾಗಿದ್ದು, ಮೊದಲ ಗಂಡು ಮಗು ನ್ಯೂನತೆಯಿಂದ ಮುಕ್ತವಾಗಿದೆ. ಆದರೆ, ಎರಡನೇ ಮಗು ಈ ರೀತಿ ಹುಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಮಗುವಿಗೆ ಈಗ 4 ತಿಂಗಳಾಗಿದ್ದು ಆರೋಗ್ಯವಾಗಿದೆ.
`ದಂಪತಿ ಸಂಬಂಧದಲ್ಲೇ ಮದುವೆಯಾಗಿರುವುದು ಇಂತಹ ನ್ಯೂನತೆಗೆ ಕಾರಣ ಇರಬಹುದು. ಜಗತ್ತಿನಲ್ಲಿ ಇಂತಹ 70 ಪ್ರಕರಣ ಇದುವರೆಗೆ ವರದಿಯಾಗಿವೆ. ಇಂತಹ ಮಗುವಿಗೆ ಕೃತಕ ಜನನಾಂಗ ಜೋಡಿಸಬಹುದು. ಆದರೆ, ಶಿಶ್ನ ನಿಮಿರುವಿಕೆ ಇರುವುದಿಲ್ಲ. ಅದರ ಬದಲು ವೃಷಣ ಕತ್ತರಿಸಿ, ಬಾಲಕಿಯನ್ನಾಗಿ ಮಾಡಬಹುದು.
ಆ ಮಗು ಸಾಂಸಾರಿಕ ಜೀವನವನ್ನೂ ನಡೆಸಬಹುದು. ಆದರೆ, ಗರ್ಭಕೋಶ ಇಲ್ಲದ ಕಾರಣ ಮಗು ಪಡೆಯಲು ಸಾಧ್ಯವಾಗುವುದಿಲ್ಲ. ಗಂಡು ಅಥವಾ ಹೆಣ್ಣಾಗಿ ಬದಲಿಸುವ ಕುರಿತು ಶಸ್ತ್ರಚಿಕಿತ್ಸೆ ನಡೆಸುವ ಬಗ್ಗೆ ದಂಪತಿಯೇ ನಿರ್ಧಾರ ಕೈಗೊಳ್ಳಬೇಕು~ ಎನ್ನುತ್ತಾರೆ ಕಡ್ಲಿ ನರ್ಸಿಂಗ್ ಹೋಮ್‌ನ ವೈದ್ಯ ನಾಗಪ್ಪ ಕಡ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.