ADVERTISEMENT

ಜಿಎಸ್‍ಎಸ್‌ ಸ್ಮರಣಾರ್ಥ ಗೀತಗಾಯನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 10:01 IST
Last Updated 3 ಮಾರ್ಚ್ 2014, 10:01 IST

ಹರಪನಹಳ್ಳಿ:  ಹೊರಗೆ ನೆತ್ತಿಯ ಮೇಲೆ ಸುಡುವ ರಣ ಬಿಸಿಲಿನ ಧಗೆ. ಕಾಲೇಜಿನ ಆವರಣದ ಒಳಗೆ ಅನುರಣಿಸಿದ ಜಿಎಸ್‌ಎಸ್‌ ಕಾವ್ಯದ ಹೊನಲು. ಅಲೆ ಅಲೆಯಾಗಿ ಹರಿದ ಡಾ.ಜಿಎಸ್‌ಎಸ್‌ ಭಾವಗೀತೆಗಳ ಝೇಂಕಾರ ಸಭಿಕರ ಮನಕ್ಕೆ ರಸಾನುಭವ ನೀಡಿತು.

–ಇಂತಹದೊಂದು ಅಪರೂಪದ ಕ್ಷಣಕ್ಕೆ ಶನಿವಾರ ಸಾಕ್ಷಿಯಾಗಿದ್ದು ಪಟ್ಟಣದ ಅಂಬ್ಲಿ ದೊಡ್ಡಭರಮಪ್ಪ ಪ್ರಥಮದರ್ಜೆ ಮಹಾವಿದ್ಯಾಲಯ. ರಾಷ್ಟ್ರಕವಿ ಡಾ.ಜಿ.ಎಸ್‌.ಶಿವರುದ್ರಪ್ಪ ಸ್ಮರಣಾರ್ಥ ಹಮ್ಮಿಕೊಂಡಿದ್ದ ಗೀತಗಾಯನ, ಕವಿಗೋಷ್ಠಿ ಹಾಗೂ ಕಾವ್ಯಕಮ್ಮಟ ಸಮಾರಂಭದಲ್ಲಿ.
‘ಹಣತೆ’ ಹಚ್ಚುತ್ತೇನೆ ನಾನು ಈ ಕತ್ತಲನ್ನು ಗೆಲ್ಲುತ್ತೇನೆಂಬ ಜಿದ್ದಿನಿಂದಿಲ್ಲ ಎಂಬ ಜಿಎಸ್‌ಎಸ್‌ ಅವರ ಕವನವನ್ನು ವಾಚಿಸುವ ಮೂಲಕ ಧಾರವಾಡ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಡಾ.ಶಾಮಸುಂದರ ಬಿದರಕುಂದಿ ಸಮಾರಂಭ ಉದ್ಘಾಟಿಸಿದರು.

ಹಣತೆ ಹಚ್ಚುವ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಬೆಳಗಿಸಿದ ಕವಿ ಜಿಎಸ್‌ಎಸ್‌ ಕನ್ನಡಿಗರ ಮನದಾಳದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರು ಹಚ್ಚಿದ ಕನ್ನಡ ದೀಪ ನಾಡಿನ ಗಡಿ ಮೀರಿ ಬೆಳಗಿಸಿದೆ ಎಂದು ಹೇಳಿದರು.

ಬಳಿಕ ಜಿಎಸ್‌ಎಸ್‌ ರಚನೆಯ ಹಾಡುಗಳನ್ನು ಚಿತ್ರದುರ್ಗದ ಜಿ.ವಿ.ವೇಣುಗೋಪಾಲ್‌ ತಂಡ ಹಾಡಿತು.

‘ಎಲ್ಲೋ ಹುಡುಕಿದೆ ಇಲ್ಲದ ದೇವರ...’, ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ....’, ‘ಕಾಣದ ಕಡಲಿಗೆ ಹಂಬಲಿಸಿದೆ ಮನ...’, ‘ಆಕಾಶ ನೀಲಿಯಲಿ....’ ಗೀತೆ ಸೇರಿದಂತೆ  ಹಲವು ಗೀತೆಗಳು ವೇಣುಗೋಪಾಲ್‌ ಅವರ ಕಂಠಸಿರಿಯಿಂದ ಹೊರಹೊಮ್ಮಿದವು. ಅದರಲ್ಲಿಯೂ ವಿಶೇಷವಾಗಿ,
‘ಮುಂಗಾರಿನ ಅಭಿಷೇಕಕೆ..
ಮಿದುವಾಯಿತು ನೆಲವು
ಧಗೆಯಾರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲವು...’
ಗೀತೆ ಪ್ರೇಕ್ಷಕರ ಮನಗೆದ್ದಿತು. ಜಿ.ಎನ್‌.ಚಂದ್ರಪ್ಪ ತಬಲಾ ಸಾಥ್‌ ನೀಡಿದರೆ, ಜಿ.ವಿ.ಮಾರುತೇಶ್‌ ಖಂಜರ ನುಡಿಸಿದರು.

ಪ್ರಾಂಶುಪಾಲ ಪ್ರೊ.ಎಸ್‌. ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಡಿ.ರಾಮನಮಲಿ, ಕಾಲೇಜು ಆಡಳಿತ ಮಂಡಳಿಯ ಸದಸ್ಯ ಅಂಬ್ಲಿ ವಾಗೀಶ್‌, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ರುದ್ರಪ್ಪ, ಎಸ್‌ಎಸ್‌ಎಚ್‌ ಜೈನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಕುರುವತ್ತೆಪ್ಪ ಉಪಸ್ಥಿತರಿದ್ದರು.

ಕವಿಗೋಷ್ಠಿಯಲ್ಲಿ ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಸ್ವರಚಿತ ಕವಿತೆ ವಾಚಿಸಿದರು. ಸ್ಪರ್ಧೆಯಲ್ಲಿ ಆತಿಥೇಯ ಕಾಲೇಜಿನ ವಿದ್ಯಾರ್ಥಿ ಎ.ಕೆ.ಶಿವಣ್ಣ ಪ್ರಥಮ ಬಹುಮಾನ ಪಡೆದರೆ, ಹರಿಹರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎಸ್‌.ಎಂ.ಈರಮ್ಮ ಅವರು ಎರಡನೇ ಬಹುಮಾನ ಪಡೆದುಕೊಂಡರು. ಹೊಸಪೇಟೆ ಉಗಮದೇವಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಎನ್‌.ತಾಯಶ್ರೀ ಹಾಗೂ ಸ್ಥಳೀಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಬಸವರಾಜ ಕುರುವಿನ ವಿರಚಿತ ಕವಿತೆಗಳಿಗೆ ಮೂರನೇ ಬಹುಮಾನ ನೀಡಿ ಸತ್ಕರಿಸಲಾಯಿತು.

ಹಿರಿಯ ಸಾಹಿತಿ ಡಿ.ರಾಮನಮಲಿ ಹಾಗೂ ಕಾಲೇಜಿನ ಕನ್ನಡ ಉಪನ್ಯಾಸಕ ವೀರೇಶ್‌ ಬಣಕಾರ್‌ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.