ADVERTISEMENT

ಜಿ.ಪಂ. ಅಧ್ಯಕ್ಷರಾಗಿ ಬಸವಲಿಂಗಪ್ಪ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 6:40 IST
Last Updated 12 ಫೆಬ್ರುವರಿ 2011, 6:40 IST

ದಾವಣಗೆರೆ: ಚನ್ನಗಿರಿ ತಾಲ್ಲೂಕು ಹೊದಿಗೆರೆ ಕ್ಷೇತ್ರದ ಬಿಜೆಪಿ ಸದಸ್ಯರಾದ ಕೆ.ಜಿ. ಬಸವಲಿಂಗಪ್ಪ ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಹಾಗೂ ಹರಿಹರ ತಾಲ್ಲೂಕು ಹೊಳೆ ಸಿರಿಗೆರೆ ಕ್ಷೇತ್ರದ ಟಿ. ಮುಕುಂದಪ್ಪ ಉಪಾಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದರು.

ಕಾಂಗ್ರೆಸ್ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಿದ್ದ ಹೊನ್ನಾಳಿ ತಾಲ್ಲೂಕು ಕುಂದೂರು ಕ್ಷೇತ್ರದ ಸದಸ್ಯ ಕೆ.ಎಚ್. ಗುರುಮೂರ್ತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದೊಣೆಹಳ್ಳಿ ಕ್ಷೇತ್ರದ ಕೆ.ಪಿ. ಪಾಲಯ್ಯ ಅವರನ್ನು 2 ಮತಗಳ ಅಂತರದಿಂದ ಸೋಲಿಸಿದ ಬಸವಲಿಂಗಪ್ಪ ಅಧ್ಯಕ್ಷರಾಗಿ, ಮುಕುಂದಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಜಿಲ್ಲಾ ಪಂಚಾಯ್ತಿಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬಾವುಟ ಹಾರಿಸಿದರು.

34 ಸದಸ್ಯ ಬಲದ ಜಿಲ್ಲಾ ಪಂಚಾಯ್ತಿಯಲ್ಲಿ ಬಸವಲಿಂಗಪ್ಪ, ಮುಕುಂದಪ್ಪ ಪರವಾಗಿ 18 ಮತಗಳು ಹಾಗೂ ಗುರುಮೂರ್ತಿ, ಪಾಲಯ್ಯ ಪರವಾಗಿ 16 ಮತಗಳು ಬಂದವು. ಸದಸ್ಯರು ‘ಕೈ’ ಎತ್ತುವ ಮೂಲಕ ಮತ ಚಲಾಯಿಸಿದರು. ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಕೆ.ಎಸ್. ಪ್ರಭಾಕರ್ ಇಬ್ಬರ ಆಯ್ಕೆಯನ್ನು ಘೋಷಿಸಿದರು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿತ್ತು. ಜಿಲ್ಲಾ ಪಂಚಾಯ್ತಿಯ 34 ಸ್ಥಾನಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 18 ಹಾಗೂ ಕಾಂಗ್ರೆಸ್ 16 ಸ್ಥಾನದಲ್ಲಿ ಜಯಗಳಿಸಿದ್ದವು.

ಚುನಾವಣೆಯ ನಂತರ ಸರಳ ಬಹುಮತ ಪಡೆದಿದ್ದ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಕೊಂಡಜ್ಜಿ ಕ್ಷೇತ್ರದ ಹನಗವಾಡಿ ವೀರೇಶ್, ಅಣಜಿ ಕ್ಷೇತ್ರದ ಚಿದಾನಂದ ಐಗೂರು ಸಹ ಆಕಾಂಕ್ಷಿಗಳಾಗಿದ್ದರು.  ಕೊನೆಗೆ ಪಕ್ಷದ ವರಿಷ್ಠರ ತೀರ್ಮಾನದಂತೆ ಬೆಳಿಗ್ಗೆ 11ಕ್ಕೆ ಜಿಲ್ಲಾ ಪಂಚಾಯ್ತಿ ಕಚೇರಿಗೆ ಬಂದ ಬಸವಲಿಂಗಪ್ಪ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮುಕುಂದಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಎರಡು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಪರವಾಗಿ ಗುರುಮೂರ್ತಿ ಎರಡು ನಾಮಪತ್ರ ಸಲ್ಲಿಸಿದರೆ. ಪಾಲಯ್ಯ ಮೂರು ನಾಮಪತ್ರ ಸಲ್ಲಿಸಿದರು. ಬೆಂಗಳೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಕೆ.ಆರ್. ರಾಮಕೃಷ್ಣ ನಾಮಪತ್ರ ಸ್ವೀಕರಿಸಿದರು. ಮಧ್ಯಾಹ್ನ 1ಕ್ಕೆ ಚುನಾವಣೆ ಆರಂಭವಾಗಿ 1.35ಕ್ಕೆ ಅಂತ್ಯವಾಯಿತು.

ಕಾರ್ಯಕರ್ತರ ಸಂಭ್ರಮ
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಘೋಷಣೆ ಆಗುತ್ತಿದ್ದಂತೆ ಹೊರಗೆ ನೆರೆದ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಚನ್ನಗಿರಿ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಜಮಾಯಿಸಿದ್ದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್, ಸಂಸದ ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಬಿ.ಪಿ. ಹರೀಶ್ ಹಾಜರಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಕೋರಿದರು.

ವೀರೇಶ್ ವಿರುದ್ಧ ರೇಗಿದ ಶಾಸಕ ಹರೀಶ್
ದಾವಣಗೆರೆ: ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕೊಂಡಜ್ಜಿ ಕ್ಷೇತ್ರದ ಬಿಜೆಪಿ ಸದಸ್ಯ ವೀರೇಶ್ ವರಿಷ್ಠರ ತೀರ್ಮಾನದ ವಿರುದ್ಧ ಶುಕ್ರವಾರ ಅಸಮಾಧಾನಗೊಂಡಿದ್ದರು.
ನಾಮಪತ್ರ ಸಲ್ಲಿಸಿದ ನಂತರ ಎಲ್ಲ ಸದಸ್ಯರನ್ನು ಪಕ್ಷದ ಕಚೇರಿಗೆ ಕರೆ ತಂದ ಜಿಲ್ಲಾ ಅಧ್ಯಕ್ಷ ಟಿ. ಗುರುಸಿದ್ದನಗೌಡ ಸಭೆಯಲ್ಲಿ ಅನುಸರಿಸಬಹುದಾದ ತಂತ್ರವನ್ನು ತಿಳಿಸಿದರು. ಆದರೆ, ಸಭೆಗೆ ಗೈರು ಹಾಜರಾದ ವೀರೇಶ್, ಸಿಇಒ ಕಚೇರಿಯಲ್ಲಿ ಬಂದು ಕುಳಿತಿದ್ದರು.

ಇತ್ತ ಗಾಬರಿಗೊಂಡ ಶಾಸಕ ಬಿ.ಪಿ. ಹರೀಶ್ ಎಲ್ಲಡೆ ವೀರೇಶ್‌ಗಾಗಿ ಹುಡುಕಾಡಿದರು. ಕೊನೆಗೆ ಸಿಇಒ ಕಚೇರಿಗೆ ಬಂದು ವೀರೇಶ್ ವರ್ತನೆ ಖಂಡಿಸಿ, ಎಲ್ಲರ ಎದುರೇ ರೇಗಾಡಿದರು. ನಂತರ ವೀರೇಶ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.ಒಂದು ಸದಸ್ಯ ಸ್ಥಾನ ವ್ಯತ್ಯಾಸವಾಗಿದ್ದರೂ, ಬಿಜೆಪಿ ಹಾಗೂ ಕಾಂಗ್ರೆಸ್ ಸಮಬಲಗಳಿಸುವ ಸಾಧ್ಯತೆ ಇದ್ದ ಕಾರಣ ಬಿಜೆಪಿ ವರಿಷ್ಠರು ತೀವ್ರ ಆತಂಕಗೊಂಡಿದ್ದರು. ಕೊನೆಗೆ ಎಲ್ಲವೂ ಸಂಖಾಂತ್ಯವಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.