ADVERTISEMENT

ಜಿಲ್ಲಾಸ್ಪತ್ರೆಯಲ್ಲಿ ನಿರ್ಮಾಣವಾಗಲಿದೆ `ವೃದ್ಧರ ವಿಭಾಗ'

ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ; ಕಟ್ಟಡ ನಿರ್ಮಾಣಕ್ಕೆ ಜಾಗ ನಿಗದಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 10:29 IST
Last Updated 19 ಜುಲೈ 2013, 10:29 IST

ದಾವಣಗೆರೆ: ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳ ಜನರಿಗೆ ಆರೋಗ್ಯ ಸೇವೆ ಕಲ್ಪಿಸುತ್ತಿರುವ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಸುಸಜ್ಜಿತ `ವೃದ್ಧರ ವಿಭಾಗ' ಆರಂಭಿಸಲು ಯೋಜಿಸಲಾಗಿದೆ.

ಈ ಸಂಬಂಧ ಪ್ರಸ್ತಾವ ಸಿದ್ಧಪಡಿಸಿ, ಕಟ್ಟಡ ನಿರ್ಮಾಣಕ್ಕೆಂದುರೂ 70 ಲಕ್ಷ ಅನುದಾನ ಕಲ್ಪಿಸುವಂತೆ ಸರ್ಕಾರವನ್ನು ಕೋರಲಾಗಿದೆ. ಕರ್ನಾಟಕ ಆರೋಗ್ಯ ವ್ಯವಸ್ಥೆ ಸುಧಾರಣೆ ಹಾಗೂ ಅಭಿವೃದ್ಧಿ ಯೋಜನೆಯಡಿ ವೃದ್ಧರ ವಿಭಾಗ ನಿರ್ಮಿಸಲಾಗುತ್ತಿದೆ. ಆಸ್ಪತ್ರೆ ಆವರಣದಲ್ಲಿರುವ ರಕ್ತನಿಧಿಯ ಬಳಿ ಇದಕ್ಕಾಗಿ ಜಾಗ ಗುರುತಿಸಲಾಗಿದ್ದು, ಸರ್ಕಾರದ ಅನುಮೋದನೆ ನಿರೀಕ್ಷಿಸಲಾಗಿದೆ.

60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆಗಳು ತ್ವರಿತವಾಗಿ ದೊರೆಯಬೇಕು. ಇದಕ್ಕೆ, ಪ್ರತ್ಯೇಕ ವಿಭಾಗವಿರಬೇಕು ಎಂಬ ಕೇಂದ್ರ ಸರ್ಕಾರದ ನಿಯಮದಂತೆ ಜಿಲ್ಲಾ ಆಸ್ಪತ್ರೆಯಲ್ಲೂ ವೃದ್ಧರ ವಿಭಾಗ ಆರಂಭಿಸಲಾಗುತ್ತಿದೆ.

`ಜಿಲ್ಲಾ ಆಸ್ಪತ್ರೆಗೆ ನಿತ್ಯ 120ರಿಂದ 150 ಮಂದಿ ಒಳರೋಗಿಗಳಾಗಿ ದಾಖಲಾಗುತ್ತಾರೆ. 1,200ರಿಂದ 1,300 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸೇವೆ ಪಡೆಯುವವರಲ್ಲಿ ಶೇ 15ರಷ್ಟು ಮಂದಿ 60 ವರ್ಷ ಮೀರಿದವರೇ ಇರುತ್ತಾರೆ. ಪ್ರಸ್ತುತ ಸಾಮಾನ್ಯ ವಾರ್ಡ್‌ಗಳಲ್ಲೇ ಅವರಿಗೆ ಚಿಕಿತ್ಸೆ ನೀಡಬೇಕಿರುವುದರಿಂದ ವಿಳಂಬವಾಗಬಹುದು; ಸಿಬ್ಬಂದಿ ಕೊರತೆಯ ಪರಿಣಾಮವಾಗಿ ವೃದ್ಧರ ಬಗ್ಗೆ ವಿಶೇಷ ಕಾಳಜಿ ವಹಿಸುವುದಕ್ಕೆ ಸಾಧ್ಯವಾಗದಿರಬಹುದು.

ಇದನ್ನು ತಪ್ಪಿಸುವ ಉದ್ದೇಶದಿಂದ ಪ್ರತ್ಯೇಕ ವಿಭಾಗ ಆರಂಭಿಸಲು ಉದ್ದೇಶಿಸಲಾಗಿದೆ. ಸರ್ಕಾರದಿಂದ ಹಣ ಬಂದ ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ,  ವೃದ್ಧರು ಆಯಾಸವಿಲ್ಲದೇ ಬಂದು ಸೇವೆ ಪಡೆದು ಹೋಗಬಹುದಾದ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗುವುದು' ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಪರಶುರಾಮಪ್ಪ ಅವರು `ಪ್ರಜಾವಾಣಿ'ಗೆ ತಿಳಿಸಿದರು.

`ಇದರಿಂದ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಮೊದಲಾದ ಜಿಲ್ಲೆಗಳ ರೋಗಿಗಳಿಗೆ ಅನುಕೂಲ ಆಗಲಿದೆ. 60 ವರ್ಷದ ನಂತರ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ಅಶಕ್ತಿ, ಹೃದಯ, ಶ್ವಾಸಕೋಶ ಸಂಬಂಧಿ ರೋಗಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಸ್ನಾಯುಸೆಳೆತ, ಪಾರ್ಶ್ವವಾಯು ಮೊದಲಾದ ಕಾಯಿಲೆ ಎದುರಾಗುತ್ತವೆ.

ಇವುಗಳಿಗೆ ವಿಶೇಷ ಚಿಕಿತ್ಸೆ ನೀಡಲು ವಿಭಾಗಕ್ಕೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಮಹಿಳೆ ಯರು, ಪುರುಷರಿಗೆ ಪ್ರತ್ಯೇಕ ಚಿಕಿತ್ಸೆ ನೀಡಲಾಗುವುದು' ಎಂದು ಮಾಹಿತಿ ನೀಡಿದರು.

ರೂ 1.5 ಕೋಟಿ ಮೌಲ್ಯದ ಸಾಧನ:
ಪ್ರಸ್ತುತ ಆಸ್ಪತ್ರೆಯಲ್ಲಿ ಅತ್ಯಾಧುನಿಕ `ಎಂಆರ್‌ಐ (ಮಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಜ್) ಸಿಟಿ ಸ್ಕ್ಯಾನ್ ಸೌಲಭ್ಯ' ಇಲ್ಲ. ಇದರಿಂದ ರೋಗಿಗಳಿಗೆ ತೊಂದರೆಯಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಅಥವಾ ಬೆಂಗಳೂರಿಗೆ ಹೋಗಬೇಕಾದ ಸ್ಥಿತಿ ಇದೆ. ಇದಕ್ಕೆರೂ 4 ಸಾವಿರದವರೆಗೂ ವೆಚ್ಚವಾಗುತ್ತದೆ.

ADVERTISEMENT

ರೋಗಿಗಳಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಲುರೂ 1.5 ಕೋಟಿಯಿಂದರೂ 2 ಕೋಟಿ ವೆಚ್ಚದ ಘಟಕ ಮಂಜೂರು ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ತಲೆಗೆ ಪೆಟ್ಟಾಗುವುದು, `ಬಾಡಿ ಟ್ಯೂಮರ್', `ಬ್ರೇನ್ ಟ್ಯೂಮರ್' ಮೊದಲಾದವುಗಳನ್ನು ನಿಖರವಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡಬಹುದು. ಈ ಸ್ಕ್ಯಾನಿಂಗ್‌ಗೆ ಅತ್ಯಂತ ಕನಿಷ್ಠ ಶುಲ್ಕ ವಿಧಿಸಿ, ರೋಗಿಗಳಿಗೆ ಸೌಲಭ್ಯ ಒದಗಿಸಲಾಗುವುದು. ಆಸ್ಪತ್ರೆಗೆ ಬರುವ ಶೇ 20ರಷ್ಟು ರೋಗಿಗಳಿಗೆ ಇದರ ಪ್ರಯೋಜನ ದೊರೆಯಲಿದೆ ಎನ್ನುತ್ತಾರೆ ಅಧೀಕ್ಷಕರು.

ಆಸ್ಪತ್ರೆಯಲ್ಲಿ ಪ್ರಸ್ತುತ ಹೆರಿಗೆ ವಿಭಾಗದಲ್ಲಿ 120 ಹಾಸಿಗೆಗಳಿವೆ. ಇದನ್ನು 220ಕ್ಕೆ ಮೇಲ್ದರ್ಜೆಗೇರಿಸಬೇಕು ಎಂದು ಪ್ರಸ್ತಾವ ಸಲ್ಲಿಸಲಾಗಿದೆ. ಆಸ್ಪತ್ರೆಯಲ್ಲಿ ನಿತ್ಯ ಕನಿಷ್ಠ 20 ಹೆರಿಗೆಗಳು ಆಗುತ್ತಿವೆ. ರೋಗಿಗಳ ಒತ್ತಡ ಹೆಚ್ಚಿರುವುದರಿಂದ ಬೇಗನೆ ಬಿಡುಗಡೆ ಮಾಡಲಾಗತ್ತಿದೆ. 100 ಹಾಸಿಗೆ ಹೆಚ್ಚಾಗುವುದರಿಂದ ಇಂತಹ ಪ್ರಮೇಯ ಇರುವುದಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.