ADVERTISEMENT

ಜಿಲ್ಲಾ ಉತ್ಸವಕ್ಕೆ ಮೆರವಣಿಗೆ ರಂಗು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:10 IST
Last Updated 11 ಫೆಬ್ರುವರಿ 2012, 10:10 IST

ದಾವಣಗೆರೆ: ಜಿಲ್ಲಾ ಉತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಮೆರವಣಿಗೆಗೆ ಫೆ. 11ರಂದು ಮಧ್ಯಾಹ್ನ 2ಕ್ಕೆ ದುರ್ಗಾಬಿಂಕಾ ದೇವಸ್ಥಾನದ ಮುಂಭಾಗ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಚಾಲನೆ ನೀಡುವರು.

ದುರ್ಗಾಂಬಿಕಾ ದೇವಸ್ಥಾನದಿಂದ ಹೊರಟ ಮೆರವಣಿಗೆ ಹೊಂಡದ ಸರ್ಕಲ್, ಗಣಪತಿ ದೇವಸ್ಥಾನ, ಚೌಕಿಪೇಟೆ, ಹಾಸಬಾವಿ ಸರ್ಕಲ್, ಮಂಡಿಪೇಟೆ, ಅಶೋಕ ಚಿತ್ರಮಂದಿರ ರಸ್ತೆ, ಜಯದೇವ ಸರ್ಕಲ್, ಅಂಬೇಡ್ಕರ್ ವೃತ್ತ, ಎವಿಕೆ ಕಾಲೇಜು ರಸ್ತೆ, ಪಿ.ಬಿ. ರಸ್ತೆ ಮೂಲಕ ಸಾಗಿ ಪ್ರೌಢಶಾಲಾ ಮೈದಾನ ತಲುಪುವುದು ಎಂದು ತಹಶೀಲ್ದಾರ್ ಡಾ.ಬಿ.ಆರ್. ಹರೀಶ್, ಮೆರವಣಿಗೆ ಸಮಿತಿಯ ಉತ್ಸವ ಕಾರ್ಯದರ್ಶಿ ಬಾರಕೇರ ಕರಿಯಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೆರವಣಿಗೆಯಲ್ಲಿ ಭುವನೇಶ್ವರಿಯ ರಥ, ಆನೆ, ಕುದುರೆ, ನಾದಸ್ವರ ವಾದನ, ಪೊಲೀಸ್ ಬ್ಯಾಂಡ್‌ಸೆಟ್, ಎನ್‌ಸಿಸಿ ಸ್ಕೌಟ್ ಅಂಡ್ ಗೈಡ್ಸ್, ಸರ್ಕಾರದ ವಿವಿಧ ಇಲಾಖೆಯ ಮಾಹಿತಿ ಬಿಂಬಿಸುವ ಸ್ತಬ್ಧಚಿತ್ರಗಳು ಹಾಗೂ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. 120 ಅಲಂಕೃತ ಕುಂಭ ಹೊತ್ತ ಮಹಿಳೆಯರು, 5 ಅಲಂಕೃತ ಎತ್ತಿನ ಬಂಡಿ ಮೆವರಣಿಗೆ ಜತೆ ಸಾಗಲಿವೆ ಎಂದು ವಿವರಿಸಿದರು.

ಮೆರವಣಿಗೆ ಸಂದರ್ಭದಲ್ಲಿ ಜನರು ರಸ್ತೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು. ರಂಗೋಲಿ ಬಿಡಿಸಿ ಸಹಕರಿಸಬೇಕು ಎಂದು ಕೋರಲಾಗಿದೆ. ಮೆರವಣಿಗೆಯಲ್ಲಿ ಜಿಲ್ಲೆಯ ಎಲ್ಲ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರು ಹಾಗೂ ಸಾರ್ವಜನಿಕರು ಭಾಗವಹಿಸುವರು. ಸಂಜೆ 6ಕ್ಕೆ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ದಾವಣಗೆರೆ ಉತ್ಸವ ಆರಂಭವಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ನಗರ ಡಿವೈಎಸ್‌ಪಿ ಕೆ.ಪಿ. ಚಂದ್ರಪ್ಪ, ಕರವೇ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಸಮರಸೇನೆ ಅಧ್ಯಕ್ಷ ಅತ್ತಿಗೆರೆ ಮಂಜುನಾಥ್, ಕಲಾವಿದ ಮಾಗಾನಹಳ್ಳಿ ಮಂಜುನಾಥ್, ಜಯರಾಮ್, ಸಿಪಿಐ ಎಚ್.ಕೆ. ರೇವಣ್ಣ, ಎಂ.ಸಿ. ದಶರಥಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಅಭಿವೃದ್ಧಿ ದರ್ಶನ: ಉದ್ಘಾಟನೆ
ಜಿಲ್ಲಾ ಉತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ಜಿಲ್ಲಾಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ರಾಜ್ಯ ವಾರ್ತಾ ಇಲಾಖೆ ವತಿಯಿಂದ ಸರ್ಕಾರದ ವಿವಿಧ ಯೋಜನೆ ಹಾಗೂ ಪ್ರಗತಿ ಕುರಿತ ಅಭಿವೃದ್ಧಿ ದರ್ಶನ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಮಹಾನಗರ ಪಾಲಿಕೆ ಮೇಯರ್ ಎಚ್.ಎನ್. ಗುರುನಾಥ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವೀರೇಶ್ ಹನಗವಾಡಿ, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್. ಮಹೇಶ್ವರಯ್ಯ, ಸಹಾಯಕ ನಿರ್ದೇಶಕ ಎಚ್.ಜಿ. ರವಿರಾಜ್, ವಾರ್ತಾ ಸಹಾಯಕ ಟಿ.ಕೆ. ಹರೀಶ್, ಸಿಬ್ಬಂದಿ ನಾಗರಾಜ್, ಗಂಗಾಧರ್, ಚನ್ನಕೇಶವ, ಬಸವರಾಜಪ್ಪ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.