ADVERTISEMENT

ಜಿಲ್ಲಾ ಉತ್ಸವ; ಅಖಾಡದಲ್ಲಿ ಸೆಣಸಾಟ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 9:15 IST
Last Updated 10 ಫೆಬ್ರುವರಿ 2012, 9:15 IST

ದಾವಣಗೆರೆ: ಜಿಲ್ಲಾ ಉತ್ಸವದ ಅಂಗವಾಗಿ ನಗರದ ಬೀರಲಿಂಗೇಶ್ವರ ದೇವಸ್ಥಾನದ ಕುಸ್ತಿ ಅಖಾಡದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಗುರುವಾರ ಆರಂಭವಾಯಿತು.

ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಪಂದ್ಯಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಚವಾಣ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಸುಚೇತಾ ನೆಲವಿಗಿ, ಮಾಜಿ ಶಾಸಕ ಕೆ. ಮಲ್ಲಪ್ಪ, ಎಚ್.ಬಿ. ಮಂಜುನಾಥ್ ಇತರರು ಭಾಗವಹಿಸಿದ್ದರು.

ಫಲಿತಾಂಶ: 66 ಕೆಜಿ ವಿಭಾಗದಲ್ಲಿ ನಡೆದ ಪಂದ್ಯಾವಳಿಗಳಲ್ಲಿ ದಾವಣಗೆರೆಯ ಶಿವಾನಂದ ಮಾಳಗಿ ಅವರು ಬೆಳಗಾವಿಯ ನಿಶಾಂತ್ ಪಾಟೀಲ್ ಅವರನ್ನು 8-1ಅಂಕಗಳ ಅಂತರದಲ್ಲಿ ಸೋಲಿಸಿದರು. 

ದಾವಣಗೆರೆಯ ಮಹಾದೇವ ಸಿಂಧೆ ಅವರು ಜಮಖಂಡಿಯ ಮನೋಜ್ ಬಂದಿ ಅವರನ್ನು 2-1 ಅಂಕಗಳಿಂದ ಸೋಲಿಸಿದರು. ಧಾರವಾಡದ ಕ್ರೀಡಾ ತರಬೇತಿ ಕೇಂದ್ರದ ನಾಗರಾಜ್ ಅವರು ಬೆಳಗಾವಿಯ ಪ್ರಕಾಶ್ ಅವರನ್ನು 2 ನೇರ ಸೆಟ್‌ಗಳಿಂದ ಸೋಲಿಸಿದರು.

ಸಮಬಲ ಸಾಧನೆ: ಸಂಜೆ ವೇಳೆಗೆ ಮೂರು ಮುಕ್ತ ಪಂದ್ಯಗಳು ನಡೆದಿದ್ದು, ಕುಸ್ತಿಪಟುಗಳು ಸಮಬಲ ಸಾಧಿಸಿದರು. ಕೊಲ್ಲಾಪುರದ ಸಲಾವುದ್ದೀನ್ ಮತ್ತು ಮಲ್ಲಪ್ಪ, ಬೆಳಗಾವಿಯ ರೇಷ್ಮಾ ಅಂಬುಜಿ ಮತ್ತು ಗದಗದ ಬಶೀರಾ, ಬೆಳಗಾವಿಯ ನಾಗರತ್ನಾ ಸಿದ್ದಿ ಮತ್ತು ಗದಗದ ಪ್ರೇಮಾ ಅವರ ನಡುವೆ 30 ನಿಮಿಷಗಳ ಸ್ಪರ್ಧೆ ನಡೆಯಿತು.

ಶುಕ್ರವಾರ ಅಂತಿಮ ಪಂದ್ಯಗಳು ನಡೆಯಲಿವೆ.
ನಾಟಕೋತ್ಸವ
ಜಿಲ್ಲಾಡಳಿತದ ವತಿಯಿಂದ ನಡೆಯುವ `ದಾವಣಗೆರೆ ಹಬ್ಬ~ದ ಅಂಗವಾಗಿ ಫೆ. 11 ಮತ್ತು 13ರಂದು ನಗರದ ಎಂಸಿಸಿ `ಬಿ~ ಬ್ಲಾಕ್‌ನ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.

11ರಂದು ಸಂಜೆ 6.30ರಿಂದ ರಾತ್ರಿ 9ರವರೆಗೆ ಸ್ಥಳೀಯ ಸಂಚಾರಿ ಕೆಬಿಆರ್ ಡ್ರಾಮಾ ಕಂಪೆನಿಯ ಕಲಾವಿದರು `ಮುದುಕನ ಮದುವೆ~ ನಾಟಕ ಪ್ರದರ್ಶಿಸುವರು. 13ರಂದು ಸಂಜೆ 6.30ರಿಂದ ರಾತ್ರಿ 9ರವರೆಗೆ ಜಯಲಕ್ಷ್ಮೀ ನಾಟಕ ಸಂಘದಿಂದ `ಧರ್ಮದೇವತೆ~ ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ. ನಾಟಕೋತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಕಲಾಭಿಮಾನಿಗಳು ಆಗಮಿಸುವಂತೆ ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.