ADVERTISEMENT

ಜಿಲ್ಲೆಯಲ್ಲಿ ಸುಧಾರಿಸಿದ ಅಂತರ್ಜಲ ಮಟ್ಟ!

ವಾಡಿಕೆಗಿಂತಲೂ ಹೆಚ್ಚು ಮಳೆ, ಅತಿವೃಷ್ಟಿ–ಅನಾವೃಷ್ಟಿಗೆ ರೂ.126 ಕೋಟಿ ನಷ್ಟ

ಎಲ್‌.ಮಂಜುನಾಥ್‌.ಸಾಸಲು, ದೊಡ್ಡಬಳ್ಳಾಪುರ ತಾ.
Published 26 ಸೆಪ್ಟೆಂಬರ್ 2013, 6:01 IST
Last Updated 26 ಸೆಪ್ಟೆಂಬರ್ 2013, 6:01 IST

ದಾವಣಗೆರೆ: ತೋಟಗಾರಿಕೆ ಸಚಿವರ ತವರು ಜಿಲ್ಲೆ ದಾವಣಗೆರೆಯಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಸುಮಾರು 19 ಸಾವಿರ ಹೆಕ್ಟೇರ್‌ ಪ್ರದೇಶದ ಕೃಷಿ ಬೆಳೆ ಮತ್ತು 141 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಗೀಡಾಗಿವೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಈ ವರ್ಷ ಜಿಲ್ಲೆಯಲ್ಲಿ ರೂ. 126ಕೋಟಿಗೂ ಅಧಿಕ ಮೊತ್ತದ ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತ ಇತ್ತೀಚೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. 

ಮತ್ತೊಂದೆಡೆ, ಇಡೀ ಜಿಲ್ಲೆಯಲ್ಲಿಯೇ ಈ ವರ್ಷ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದ ಪರಿಣಾಮ, ಜಿಲ್ಲೆಯ ಕೆಲವು ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಈ ಬಾರಿ ಅಂತರ್ಜಲ ಮಟ್ಟದಲ್ಲಿ ಅಲ್ಪ ಮಟ್ಟಿಗೆ ಹೆಚ್ಚಳ ಕಂಡುಬಂದಿದೆ.

‘ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಅಧಿಕ ಮಳೆ ಸುರಿದಿದೆ. ಇದರಿಂದಾಗಿಯೂ ಜಿಲ್ಲೆಯ ಕೆಲ ತಾಲ್ಲೂಕು ವ್ಯಾಪ್ತಿಯಲ್ಲಿನ ದುರಸ್ತಿಗೊಂಡ ಕೆಲವು ಕೆರೆಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಇದು ಪರೋಕ್ಷವಾಗಿ ಜಿಲ್ಲೆಯಲ್ಲಿ ಅಂತರ್ಜಲದಮಟ್ಟವು ಸುಧಾರಿಸಲು ಕಾರಣವಾಗಿದೆ’ ಎನ್ನುತ್ತಾರೆ ಹಿರಿಯ ಭೂ ವಿಜಾ್ಞನಿ ಎಚ್.ಪಿ.ಮಲ್ಲೇಶ್. ಹರಿಹರ, ಹೊನ್ನಾಳ್ಳಿ ಮತ್ತು ಚನ್ನಗಿರಿ ಸೇರಿದಂತೆ ಜಿಲ್ಲೆಯ ನದಿ/ಕೆರೆ ಪಾತ್ರದ ತಾಲ್ಲೂಕು ಪ್ರದೇಶಗಳಲ್ಲಿ ಸಹಜವಾಗಿಯೇ ಅಂತರ್ಜಲದ ಮಟ್ಟ ಅಧಿಕವಾಗಿರುತ್ತದೆ.

ಇನ್ನು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಜಲಸಂವರ್ಧನೆ ಯೋಜನಾ ಸಂಘಗಳು ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆ ಅಡಿಯಲ್ಲಿ  ತಮ್ಮ ವ್ಯಾಪ್ತಿಯಲ್ಲಿನ ಕೆರೆಗಳನ್ನು ದುರಸ್ತಿಗೊಳಿಸಿ, ಮಳೆ ನೀರು ಸಂಗ್ರಹವಾಗಲು ಸಹಕರಿಸಿವೆ.  ಇದು ಕೂಡ ಪರೋಕ್ಷವಾಗಿ ಅಂತರ್ಜಲದಮಟ್ಟ ಸುಧಾರಿಸಲು ಕಾರಣವಾಗಿದೆ ಎಂದು ಜಿಲ್ಲೆಯ ಜಲಸಂವರ್ಧನೆ ಯೋಜನಾ ಸಂಘದ ಅಧಿಕಾರಿ ಆರ್‌.ಸಿ.ಮೋಹನ್‌ ಮಾಹಿತಿ ನೀಡುತ್ತಾರೆ.

ಕೆಲ ಭಾಗಗಳಲ್ಲಿ ಇನ್ನೂ ನೀರಿನ ಕೊರತೆ!
ದಾವಣಗೆರೆ, ಹರಪನಹಳ್ಳಿ ಮತ್ತು ಜಗಳೂರು ವ್ಯಾಪ್ತಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದರೂ, ಇದುವರೆಗೂ ಆ ಭಾಗದಲ್ಲಿನ ಕೆರೆಗಳಿಗೆ ನೀರು ಹರಿದಿಲ್ಲ. ರೈತರು ನೂರಾರು ಅಡಿ ಬೋರ್‌ವೆಲ್‌ ಕೊರೆಸಿದರೂ ನೀರು ಬಿದ್ದಿಲ್ಲ ಎನ್ನುತ್ತಾರೆ ಹರಪನಹಳ್ಳಿ ಮತ್ತು ಜಗಳೂರು ತಾಲ್ಲೂಕಿನ ಬಹುತೇಕ ರೈತರು.

‘ಕೆರೆ ಹೊಳೆತ್ತುವುದು, ಅಭಿವೃದ್ಧಿಗೊಳಿಸುವ ಹೆಸರಿನಲ್ಲಿ ಜಿಲ್ಲೆಯ ಕೆಲವು ಜಲಸಂವರ್ಧನೆ ಯೋಜನಾ ಸಂಘಗಳು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿವೆ. ಕೆರೆ ಹೂಳು ಸಮರ್ಪಕವಾಗಿ ತೆಗೆದಿಲ್ಲ. ಇದರಿಂದ ಕೆರೆಗಳಲ್ಲಿ ನೀರಿನ ಸಂಗ್ರಹಕ್ಕೆ ಅಡ್ಡಿಯಾಗಿದೆ’ ಎಂದು ಕೃಷಿ ಸಚಿವರು ಈಚೆಗೆ ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಏರ್ಪಡಿಸಿದ್ದ ರೈತರ ಸಂವಾದ ಸಭೆಯಲ್ಲಿ ಆರೋಪಿಸಿದ್ದರು.

ಅಧಿಕ ಮಳೆ ಬಿದ್ದಿರುವುದು ವಿಶೇಷ
ನಾಲ್ಕು ವರ್ಷಗಳಿಗೆ ಹೊಲಿಕೆ ಮಾಡಿದರೆ ಹರಪನಹಳ್ಳಿ ಹೊರತುಪಡಿಸಿದರೆ ಇಡೀ ಜಿಲ್ಲೆಯಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಿದೆ. ವಾಡಿಕೆಯಂತೆ ಈ ಬಾರಿ 490 ಮಿಮೀ., ಮಳೆ ಬೀಳಬೇಕಿತ್ತು. ಆದರೆ, 605 ಮಿಮೀ., ಮಳೆ ಸುರಿದಿದೆ. ಸುಮಾರು 115ಮಿಮೀಗೂ ಅಧಿಕ ಮಳೆ ಬಿದ್ದಿರುವುದು ಈ ಬಾರಿಯ ವಿಶೇಷ.
– ಆರ್.ಜೆ.ಗೊಲ್ಲರ್,  ಕೃಷಿ ಇಲಾಖೆಯ ಜಂಟಿ ನಿರ್ದೇಶಕ

ಸೂಕ್ತ ಕ್ರಮ ಅಗತ್ಯ
ಜಿಲ್ಲೆಯಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ ಮತ್ತು ಕೃಷಿಹೊಂಡ ಮತ್ತು ಚೆಕ್‌ಡ್ಯಾಂ ನಿರ್ಮಾಣದಂತಹ ಅಂತರ್ಜಲ ಅಭಿವೃದ್ಧಿ ಯೋಜನೆಗಳ ಸಮರ್ಪಕ ಜಾರಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಲ್ಲಿ ಪರೋಕ್ಷವಾಗಿ ಅಂತರ್ಜಲದಮಟ್ಟ ಹೆಚ್ಚಾಗುತ್ತದೆ. ಇದಕ್ಕೆ ರೈತರ ಮತ್ತು ಸಾರ್ವಜನಿಕರ ಪೂರ್ಣ ಸಹಕಾರ ಅಗತ್ಯ .
–ಎಚ್.ಪಿ.ಮಲ್ಲೇಶ್, ಹಿರಿಯ  ಭೂ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.