ADVERTISEMENT

ಟಿಪ್ಪು ಜಯಂತಿ: ಸರ್ಕಾರಿ ರಜೆ ಘೋಷಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 6:08 IST
Last Updated 3 ಡಿಸೆಂಬರ್ 2012, 6:08 IST

ದಾವಣಗೆರೆ: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜನ್ಮದಿನೋತ್ಸವ ಅಂಗವಾಗಿ ಸರ್ಕಾರಿ ರಜೆ ಘೋಷಿಸಬೇಕು ಎಂದು ಮಾಜಿ ಸಚಿವ ಡಾ.ಮಮ್ತಾಜ್ ಅಲಿಖಾನ್ ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕ ಟಿಪ್ಪು ಸುಲ್ತಾನ್ ಪ್ರತಿಷ್ಠಾನದ ವತಿಯಿಂದ ಈಚೆಗೆ ಮಹಮದ್ ಅಲಿ ಜೋಹೇರ್ ನಗರದಲ್ಲಿ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್ ಅವರ 262ನೇ ಜನ್ಮದಿನೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಟಿಪ್ಪು ಜಯಂತಿಗೆ ರಜೆ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಹೋರಾಟ ಮಾಡುವುದಾಗಿ ತಿಳಿಸಿದರು.
ಪ್ರಿನ್ಸ್ ಅಸೀಫ್ ಅಲಿ ಷಾ ಅವರ ಸಲಹೆಗಾರ ವಕೀಲ ಮುಕ್ರಂ ಮಾತನಾಡಿ, ಟಿಪ್ಪು ಸುಲ್ತಾನ್ ಅವರ ಮರಿಮೊಮ್ಮಗನ ಬಗ್ಗೆ ಎಲ್ಲ ದಾಖಲೆಗಳನ್ನು ಬೇಕಾದರೂ ಪ್ರಸ್ತುತಪಡಿಸುತ್ತೇನೆ ಎಂದರು.

ಟಿಪ್ಪು ಸುಲ್ತಾನ್ ದೇಶದ್ರೋಹಿ ಅಲ್ಲ. ಹಿಂದೂ ವಿರೋಧಿ ಅಲ್ಲ. ಎಲ್ಲ ಧರ್ಮ ಸಮಾನವಾಗಿ ಕಾಣುವಂಥವರಾಗಿದ್ದರು ಎಂದು ಹೇಳಿದರು. ಟಿಪ್ಪು ವಿರುದ್ಧವಾಗಿ ಮಾತನಾಡಿರುವ ಸಂಶೋಧಕ ಡಾ.ಚಿದಾನಂದಮೂರ್ತಿ ಬಹಿರಂಗ ಚರ್ಚೆಗೆ ಬರಲಿ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಮಾತನಾಡಿ, ಟಿಪ್ಪುಸುಲ್ತಾನ್ ಅವರ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಎಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿ.ಕೆ. ಮೊಜಾಹಿದ್ ಖಾನ್ ಮಾತನಾಡಿ, ಭಾರತದಲ್ಲಿ ಮೊಟ್ಟಮೊದಲಿಗೆ ರೇಷ್ಮೆ , ರಾಜ್ಯಕ್ಕೆ ಸಕ್ಕರೆ ಕಾರ್ಖಾನೆ ತಂದವರು. ಮೊದಲು ಯುದ್ಧದಲ್ಲಿ ಕ್ಷಿಪಣಿ ಬಳಸಿದ ಕೀರ್ತಿ ಟಿಪ್ಪುಗೆ ಸಲ್ಲುತ್ತದೆ. ಕೆರೆಕಟ್ಟೆ ಅಭಿವೃದ್ಧಿಪಡಿಸಿದವರು. ದೇವಸ್ಥಾನ, ಮಠ-ಮಾನ್ಯಗಳಿಗೆ ಅಪಾರ ದೇಣಿಗೆ ನೀಡಿದರು ಎಂದು ಸ್ಮರಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಎಂ. ಸತೀಶ್ ಮಾತನಾಡಿ, ಟಿಪ್ಪು ಅತ್ಯಂತ ಪ್ರಾಮಾಣಿಕ, ಧೈರ್ಯಶಾಲಿ. ನಿಜವಾದ ದೇಶಪ್ರೇಮಿ. ದೇಶಕ್ಕೋಸ್ಕರ ಹೋರಾಡಿದ ರಾಜರಾಗಿದ್ದರು ಎಂದು ಹೇಳಿದರು. ಟಿಪ್ಪು ಜಯಂತಿ ರಾಜ್ಯಾದ್ಯಂತ ಆಚರಿಸುವಂತಾಗಲಿ ಎಂದು ಆಶಿಸಿದರು.
ಮಹಮ್ಮದ್ ಅಲಿ ಜಿನ್ನಾಖಾನ್ ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ಟಿಪ್ಪು ಸುಲ್ತಾನ್ ಅವರ 7ನೇ ಮೊಮ್ಮಗನಾದ ಪ್ರಿನ್ಸ್ ಅಸೀಫ್ ಅಲಿ ಷಾ ಮಾತನಾಡಿ, ಮುತ್ತಾತ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಇಂತಹ ವ್ಯಕ್ತಿಯ ಕುಟುಂಬದವನಾದ ನಾನು ನಿರ್ಗತಿಕನಾಗಿ ಬಾಳುತ್ತಿದ್ದೇನೆ. ಸರ್ಕಾರ, ನಮಗೆ ಸಿಗಬೇಕಾದ ಸೌಲಭ್ಯ ಕಲ್ಪಿಸಬೇಕು. ನಮ್ಮ ಆಸ್ತಿ, ಹಕ್ಕನ್ನು ನಮಗೆ ಕೊಡಬೇಕು  ಎಂದರು.

`ಸಮೃದ್ಧಿ ಜೀವನ ಇಂಡಿಯಾ ಕಂಪೆನಿ'ಯ ಪ್ರವೀಣ್, ಶೌಖತ್ ಅಲಿ, ಸುರೇಶ್, ವಕ್ಫ್  ಮಂಡಳಿ ಅಧ್ಯಕ್ಷ ಅಬ್ದುಲ್ ಮಜೀದ್, ಲಿಯಾಖತ್ ಅಲಿಖಾನ್, ಮೆಹಬೂಬ್‌ಖಾನ್, ವಾಜೀದ್ ಸಾಬ್, ಅಜೀಮ್ ಉಲ್ಲಾ ಸಿರ್ಸಿ, ಸೈಕ್ಲಿಸ್ಟ್ ಬಾಬು, ರಾಜಾ ಸಾಬ್, ಇಕ್ಬಾಲ್ ಬೇಗ್, ರಿಯಾನ್ ಜಾನ್ ಮಂಡಕ್ಕಿ, ಬೀಡ ಮಹಬೂಬ್ ಬಾಷಾ, ಡ್ರೈವರ್ ಅಂಸರ್, ಎಂಜಿನಿಯರ್ ಮಹಬೂಬ್, ಹಿಮಾಯತ್‌ಖಾನ್, ಇನಾಯತ್ ಖಾನ್, ಸಾಧಿಕ್, ಇನಾಯತ್‌ಉಲ್ಲಾ, ಸುಭಾನ್ ಸಾಬ್, ಫುಟ್‌ವೇರ್ ಇಕ್ಬಾಲ್ ಸಾಬ್, ಡಿ. ಅಸ್ಲಂ ಖಾನ್, ಎಸ್.ಎಂ. ಗೌಸ್, ಸಾದಿಕ್ ಶಾಮಿಯಾನ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.