ಹರಪನಹಳ್ಳಿ: ಸ್ಥಳೀಯ ಪ್ರತಿಷ್ಠಿತ ಖಾಸಗಿ ಹಾಗೂ ಅನುದಾನಿತ ಶಿಕ್ಷಣಗಳು ಶೈಕ್ಷಣಿಕ ಅಭಿವೃದ್ಧಿಯ ನೆಪದಲ್ಲಿ ಕಾನೂನು ಬಾಹಿರವಾಗಿ ವಿದ್ಯಾರ್ಥಿಗಳಿಂದ ಡೊನೇಷನ್ ವಸೂಲಿ ಮಾಡುತ್ತಿರುವ ಕ್ರಮ ವಿರೋಧಿಸಿ ಹಾಗೂ ಅಂತಹ ಸಂಸ್ಥೆಗಳ ಮಾನ್ಯತೆ ರದ್ದುಪಡಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಷಿಯೇಷನ್(ಎಐಎಸ್‌ಎ) ಸಂಘಟನೆ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಸಂಚಾಲಕ ದೊಡ್ಡಮನಿ ಪ್ರಸಾದ್ ಮಾತನಾಡಿ, ಪ್ರತಿ ವರ್ಷ ವಿದ್ಯಾರ್ಥಿ ಸಂಘಟನೆ ಹಾಗೂ ಪೋಷಕರಿಂದ ತೀವ್ರಸ್ವರೂಪದ ಪ್ರತಿರೋಧ ವ್ಯಕ್ತವಾದರೂ ಸಹ, ಅದನ್ನು ಲೆಕ್ಕಿಸದೆ ಹಣ ಸುಲಿಗೆಯಲ್ಲಿ ತೊಡಗಿಸಿಕೊಂಡಿವೆ. ಶೈಕ್ಷಣಿಕ ಅಭಿವೃದ್ಧಿಯ ಹೆಸರಿನಲ್ಲಿ ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆಯನ್ನು ಕಲುಷಿತಗೊಳಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ವ್ಯಾಪಾರೀಕರಣದ ದಂಧೆಯನ್ನಾಗಿ ಮಾಡಿಕೊಂಡಿವೆ. ವಿದ್ಯಾರ್ಥಿಗಳಿಂದ ಅಕ್ರಮವಾಗಿ ಸಾವಿರಾರು ರೂಪಾಯಿ ವಂತಿಗೆ ವಸೂಲಿ ಮಾಡುತ್ತಿವೆ. ಒಂದೆಡೆ ತೀವ್ರ ಬರಗಾಲ; ಮತ್ತೊಂದೆಡೆ ಶಿಕ್ಷಣ ಸಂಸ್ಥೆಗಳ ಹಣ ಸುಲಿಗೆ. ಹೀಗಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಮಕ್ಕಳ ಪಾಲಿಗೆ ಶಿಕ್ಷಣ ಎಂಬುದು ಗಗನಕುಸುಮವಾಗಿದೆ ಎಂದು ಆರೋಪಿಸಿದರು.
ತಾಲ್ಲೂಕಿನಾದ್ಯಂತ ಆಂಗ್ಲಮಾಧ್ಯಮ ಕಾನ್ವೆಂಟ್ ಸ್ಕೂಲ್‌ಗಳು ನಾಯಿಕೊಡೆಗಳಂತೆ ಹುಟ್ಟುಕೊಂಡಿದ್ದು, ದನ ಕೂಡಿಸುವ ಕೊಟ್ಟಿಗೆಯಂಥ ಗೋದಾಮುಗಳಲ್ಲಿ ಕೆಲ ಶಾಲೆಗಳು ತರಗತಿ ನಡೆಸುತ್ತಿವೆ. ಆದರೂ, ಸಕಲ ಮೂಲಸೌಕರ್ಯ ಲಭ್ಯ ಎಂದು ಪೋಷಕರನ್ನು ದಾರಿ ತಪ್ಪಿಸುವ ಮೂಲಕ ಪ್ಲೇಗ್ರೂಪ್‌ನಿಂದ ಎಲ್‌ಕೆಜಿ, ಯುಕೆಜಿ ತರಗತಿಗೂ 7-8ಸಾವಿರ ಡೊನೇಷನ್ ವಸೂಲಿ ಮಾಡುತ್ತಿವೆ. ಕಾನೂನುಬಾಹಿರವಾಗಿ ಹಣ ಸುಲಿಗೆ ಮಾಡುತ್ತಿದ್ದರೂ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಿಕ್ಷಣ ಸಂಸ್ಥೆಗಳ ಅಕ್ರಮ ದಂಧೆಯಲ್ಲಿ ಪಾಲುದಾರರಾಗಿರುವ ಶಂಕೆ ಇದೆ ಎಂದು ಪ್ರತಿಭಟನಾಕಾರರು ದೂರಿದರು.
ಹಣ ಸುಲಿಗೆ ಮಾಡಿದ ಸಂಸ್ಥೆಗಳ ಮಾನ್ಯತೆ ರದ್ದುಪಡಿಸಬೇಕು. ಇಲ್ಲವಾದಲ್ಲಿ ಜೂನ್ 20ರಂದು ಉಪವಿಭಾಗಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ತಾಲ್ಲೂಕು ಕಚೇರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಸಂದೇರ್ ಪರಶುರಾಮ್, ಡಿ. ಶಶಿಕುಮಾರ್, ನಾಗರಾಜ, ಪಿ. ಮಾರೆಪ್ಪ, ದೇವರಾಜ, ಚೌಡಪ್ಪ, ಬಿ. ರಮೇಶ, ಎಸ್. ಶಿವು, ರಾಜಪ್ಪ, ಕೆ. ರವಿಚಂದ್ರನಾಯ್ಕ, ಬಿ. ವಿನಾಯಕ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.