ADVERTISEMENT

ಡೋರ್‌ ನಂಬರ್‌ ಪ್ರಕರಣ: ಆರೋಪ ನಿರಾಕರಿಸಿದ ಬಕ್ಕೇಶ್‌

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2011, 6:05 IST
Last Updated 22 ಏಪ್ರಿಲ್ 2011, 6:05 IST

ದಾವಣಗೆರೆ: ಆವರಗೆರೆ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ನೂತನ ಖಾಸಗಿ ಬಡಾವಣೆಯ ಡೋರ್‌ ನಂಬರ್‌ ನೀಡಿಕೆಯ ವಿಚಾರವಾಗಿ ಪಾಲಿಕೆಯ ವಿರೋಧ ಪಕ್ಷದ ಮುಖಂಡರು ಮಾಡಿರುವ ಆರೋಪವನ್ನು ಮಾಜಿ ಮೇಯರ್‌ ಎಂ.ಜಿ. ಬಕ್ಕೇಶ್‌ ಅಲ್ಲಗಳೆದಿದ್ದಾರೆ.

ಆವರಗೆರೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಬಡಾವಣೆ ಪ್ರದೇಶಕ್ಕೆ ಗುರುವಾರ ಸುದ್ದಿಗಾರರೊಂದಿಗೆ ಭೇಟಿ ನೀಡಿದ ಅವರು, ತಮ್ಮ ವಿರುದ್ಧದ ಆರೋಪಗಳು ನಿರಾಧಾರ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆವರಗೆರೆ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ನೂತನ ಖಾಸಗಿ ಬಡಾವಣೆಗೆ ಅಭಿವೃದ್ಧಿ ಶುಲ್ಕ ಅಥವಾ ಉಸ್ತುವಾರಿ ಶುಲ್ಕ ಪಡೆಯದೇ ಒಂದೇ ದಿನದಲ್ಲಿ 490 ನಿವೇಶನಗಳಿಗೆ ಡೋರ್‌ ನಂಬರ್‌ ನೀಡಲಾಗಿದ್ದು, ರೂ 80 ಲಕ್ಷದಷ್ಟು ಹಣವನ್ನು ಹಿಂದಿನ ಮೇಯರ್‌ ಹಾಗೂ ಅಧಿಕಾರಿಗಳು ಕೊಡುಗೆ ರೂಪದಲ್ಲಿ ಪಡೆದಿದ್ದಾರೆ ಎಂದು ವಿರೋಧ ಪಕ್ಷದವರು ಮಾಡಿರುವ ಆರೋಪಕ್ಕೆ ಅವರು ಪ್ರತಿಕ್ರಿಯೆ ನೀಡಿದರು.

ಆವರಗೆರೆಯ ಈ ಬಡಾವಣೆಯ 36 ಎಕರೆ ಪ್ರದೇಶ 30 ಜನರ ಹೆಸರಿನಲ್ಲಿದ್ದು ಅದನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ. ಅಭಿವೃದ್ಧಿ ಮಾಡಿರುವ ಜಾಗಕ್ಕೆ ಹಣ ಪಾವತಿಸುವ ಅಗತ್ಯ ಇರುವುದಿಲ್ಲ ಎಂದು ತಿಳಿಸಿದರು.

ಜ. 14ರಂದು ನಡೆದ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದ್ದು 7 ಜನ ಸದಸ್ಯರು ಭಾಗವಹಿಸಿದ್ದರು. ಜ. 31ರಂದು ನಡೆದ ಸಾಮಾನ್ಯ ಸಭೆಯಲ್ಲಿಯೂ ಅನುಮೋದನೆ ನೀಡಲಾಗಿದ್ದು ಅಂದಿನ ಸಭೆಯಲ್ಲಿ 44 ಸದಸ್ಯರು ಹಾಜರಿದ್ದರು. ಈಗ ಆರೋಪ ಮಾಡಿರುವ ಸದಸ್ಯರೂ ಅಂದಿನ ಸಭೆಯಲ್ಲಿ ಭಾಗವಹಿಸಿದ್ದರು. ಆಗಲೇ ಏಕೆ ಅವರು ಪ್ರಶ್ನಿಸಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ದಿನೇಶ ಕೆ. ಶೆಟ್ಟಿ ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2006ರಲ್ಲಿ, ಆವರಗೆರೆ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಸ್ಥಳದಲ್ಲಿ ಬಡಾವಣೆ ಅಭಿವೃದ್ಧಿಗೆ 18.22 ಎಕರೆಯಲ್ಲಿ ಡೋರ್‌ ನಂಬರ್‌ಗಳನ್ನು ನೀಡಲಾಗಿದ್ದು, ಅಲ್ಲಿ ಯಾವುದೇ ಮೂಲಸೌಲಭ್ಯ ಅಭಿವೃದ್ಧಿ ಮಾಡಿಲ್ಲ. ಅದರ ಹೊರೆ ಪಾಲಿಕೆಯ ಮೇಲೆ ಬೀಳುತ್ತದೆ ಎಂದು ತಿಳಿಸಿದರು.

ಈ ವಿಚಾರವಾಗಿ ಸಾಮಾನ್ಯ ಸಭೆಯ ಒಪ್ಪಿಗೆ ಪಡೆಯದೇ ಅಧ್ಯಕ್ಷರ ಅನುಮತಿಯ ಮೇರೆಗೆ ಮಂಜೂರಾತಿ ನೀಡಲಾಗಿದೆ. ಅದೇ ರೀತಿ ಲಲಿತಮ್ಮ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡಿಸಿಎಂ ಟೌನ್‌ಶಿಪ್‌ನಲ್ಲಿ 47 ಎಕರೆಯಲ್ಲಿ ಡೋರ್‌ ನಂಬರ್‌ ನೀಡಲಾಗಿದ್ದು, ಅದಕ್ಕೂ ಸಾಮಾನ್ಯಸಭೆಯ ಒಪ್ಪಿಗೆ ಪಡೆದಿಲ್ಲ ಎಂದು ಹೇಳಿದರು.
2001ರಿಂದ 2007ರವರೆಗಿನ ಅವಧಿಯಲ್ಲಿ ಹಲವಾರು ಬಡಾವಣೆ ಗಳಲ್ಲಿ ಇದೇ ರೀತಿ ಮಾಡಲಾಗಿದೆ. ಆ ರೀತಿಯ 60ಕ್ಕೂ ಹೆಚ್ಚು ಕಡತಗಳು ಪಾಲಿಕೆಯಲ್ಲಿವೆ ಎಂದು ತಿಳಿಸಿದರು.

ವಿರೋಧ ಪಕ್ಷದವರು ಅನಾವಶ್ಯಕ ವಾಗಿ ಗೊಂದಲ ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯಬಾರದು. ತಮ್ಮ ಮೇಲಿನ ಆರೋಪವನ್ನು ಅವರು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದರು. ಡೋರ್‌ ನಂಬರ್‌ ನೀಡಲು ತಾವು ಹಣ ಪಡೆದಿರುವುದಾಗಿ ಆರೋಪಿಸಿರುವ ವಿರೋಧ ಪಕ್ಷದ ಮುಖಂಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಿರುವುದಾಗಿ ಹೇಳಿದರು.ಮೇಯರ್‌ ಎಂ.ಎಸ್‌. ವಿಠಲ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.