ADVERTISEMENT

ತಮ್ಮಿಷ್ಟದ ಕಾರ್ಖಾನೆಗೆ ಕಬ್ಬು; ಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 6:17 IST
Last Updated 5 ಡಿಸೆಂಬರ್ 2013, 6:17 IST

ಬೆಂಗಳೂರು: ದಾವಣಗೆರೆ ಜಿಲ್ಲೆಯ 79 ಮತ್ತು ರಾಣೇಬೆನ್ನೂರು ತಾಲ್ಲೂಕಿನ ಎರಡು ಗ್ರಾಮಗಳ ರೈತರು ಪ್ರಸಕ್ತ ಹಂಗಾಮಿನ ಕಬ್ಬನ್ನು ಶಾಮನೂರು ಸಕ್ಕರೆ ಕಂಪೆನಿ ಅಥವಾ ದಾವಣಗೆರೆ ಸಕ್ಕರೆ ಕಾರ್ಖಾನೆ ಗಳಿಗೆ ಮಾರಾಟ ಮಾಡಬೇಕು ಎಂದು ಸರ್ಕಾರ ಇತ್ತೀಚೆಗೆ ಹೊರಡಿಸಿದ್ದ ಆದೇಶವನ್ನು ಒಟ್ಟು ಆರು ರೈತರು ಪಾಲಿಸಬೇಕಿಲ್ಲ.

ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ದಾವಣಗೆರೆಯ ರೈತರ ಜಿ.ಬಿ.ಶಿವಕುಮಾರ್‌ ಮತ್ತು ಐದು ಜನ ಇತರರು ತಮ್ಮ ಬೆಳೆಯನ್ನು ಯಾವುದೇ ಸಕ್ಕರೆ ಕಾರ್ಖಾನೆಗೆ ಮಾರಾಟ ಮಾಡಬಹುದು ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರು ಬುಧವಾರ ಮಧ್ಯಂತರ ಆದೇಶ ನೀಡಿದ್ದಾರೆ. ವಿಚಾರಣೆ ಮುಂದೂಡಿದ್ದಾರೆ.

ಇದೇ ಅ.19ರಂದು ಹೊಸ ಆದೇಶ ಹೊರಡಿಸಿದ್ದ ಸರ್ಕಾರ, ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿದ್ದ 52 ಗ್ರಾಮಗಳನ್ನು ಶಾಮನೂರು ಸಕ್ಕರೆ ಕಂಪೆನಿಗೆ, 29 ಗ್ರಾಮಗಳನ್ನು ದಾವಣಗೆರೆ ಸಕ್ಕರೆ ಕಂಪೆನಿಗೆ ಹಂಚಿಕೆ ಮಾಡಿದೆ. ಶಾಮನೂರು ಮತ್ತು ದಾವಣಗೆರೆ ಸಕ್ಕರೆ ಕಂಪೆನಿಗಳಿಗಿಂತ ಇತರೆ ಕಂಪೆನಿಗಳು ರೈತರಿಗೆ ಹೆಚ್ಚಿನ ಬೆಲೆ ನೀಡುತ್ತಿವೆ. ಸರ್ಕಾರದ ಆದೇಶದಿಂದ ರೈತರ ಹಕ್ಕುಗಳ ದಮನ ಆಗಿದೆ ಎಂಬುದು ರೈತರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.