ADVERTISEMENT

ತುಂಗಾ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 9:45 IST
Last Updated 15 ಅಕ್ಟೋಬರ್ 2012, 9:45 IST

ದಾವಣಗೆರೆ: ತುಂಗಭದ್ರಾ ನದಿ ಪಾತ್ರದಲ್ಲಿ ನೀರಿನ ಹರಿಯುವಿಕೆಯ ಪ್ರಮಾಣ ಗಣಿನೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮರಳು ಗಣಿಗಾರಿಕೆ ಆರಂಭಿಸಲು ಹಾಗೂ ಮರಳು ಗಣಿಗಾರಿಕೆಗೆ ಚಾಲನೆ ನೀಡಲು ಈಚೆಗೆ ನಡೆದ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಕಡ್ಡಾಯವಾಗಿ ಜಿಪಿಎಸ್ ಉಪಕರಣ ಅಳವಡಿಸಲು ಹಾಗೂ ಜಿಪಿಎಸ್ ಅಳವಡಿಸಿಕೊಂಡಿರುವ ವಾಹನಗಳಿಗೆ ಮಾತ್ರ ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಂತಹ ವಾಹನಗಳಿಗೆ ಮಾತ್ರ ಪರವಾನಗಿ ನೀಡಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ. ಪರವಾನಗಿ ಇಲ್ಲದೇ ಮರಳು ಸಾಗಾಣಿಕೆ ಮಾಡುವ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಮರಳು ಗಣಿಗಾರಿಕೆಯಲ್ಲಿ ಬೋಟ್‌ಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಅನಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ನಿಯಂತ್ರಿಸಲು ಹರಿಹರ, ಹರಪನಹಳ್ಳಿ, ಹೊನ್ನಾಳ್ಳಿ ಹಾಗೂ ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ತನಿಖಾ ದಳಗಳನ್ನು ರಚಿಸಲಾಗಿದೆ. ಅನಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಮಾಡುವ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.