ADVERTISEMENT

ತುರ್ತು ಸಮಸ್ಯೆಗೆ ಸ್ಪಂದಿಸಲು `ಕಾರ್ಯಪಡೆ'

ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 10:02 IST
Last Updated 10 ಜೂನ್ 2013, 10:02 IST

ದಾವಣಗೆರೆ: ಮಳೆಗಾಲದಲ್ಲಿ ರಾತ್ರಿ ವೇಳೆಯಲ್ಲಿ ಎದುರಾಗುವ ತುರ್ತು ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿ, ಸಿಬ್ಬಂದಿ ಒಳಗೊಂಡ ಕಾರ್ಯಪಡೆ ರಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಸೂಚಿಸಿದರು.

ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ನಗರಪಾಲಿಕೆ ಅಧಿಕಾರಿಗಳು ಮಳೆಗಾಲದಲ್ಲಿ ಚುರುಕಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಮಳೆ ಬಂದಾಗ ನಗರದ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಇದನ್ನು ತಪ್ಪಿಸಲು ಚರಂಡಿಗಳು, ಒಳಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಹೂಳು ತುಂಬಿಕೊಂಡಿದ್ದರೆ ಕೂಡಲೇ ತೆರವುಗೊಳಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು.

ಮನೆಗಳಿಗೆ ಹಾನಿಯಾಗಿದ್ದರೆ ತಕ್ಷಣ ಸ್ಪಂದಿಸಿ, ಸಂತ್ರಸ್ತರಿಗೆ ನೆರವು ದೊರಕಿಸಿಕೊಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

5ನೇ ವಾರ್ಡ್‌ನ ಬೇತೂರು ರಸ್ತೆ, ಕೊರಚರಹಟ್ಟಿ, ಎಸ್‌ಪಿಎಸ್ ನಗರ, ರಿಂಗ್ ರೋಡ್, ಹೊಸ ಆರ್‌ಟಿಒ ಬಳಿ, ಶಿವನಗರ ಹಾಗೂ ರಿಂಗ್ ರಸ್ತೆಯ ಬಳಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯರ ಅಹವಾಲುಆಲಿಸಿದರು.

ಶಿವನಗರ ಬಳಿಯ ದೊಡ್ಡ ಚರಂಡಿಯ ಹೂಳೆತ್ತಲು ರೂ 41 ಲಕ್ಷ ಅನುದಾನ ಮಂಜೂರಾಗಿದೆ. ವೇಗವಾಗಿ ಕಾಮಗಾರಿ ಮುಗಿಸಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡಬೇಕು. ಮಳೆಯಿಂದ ಹಾನಿಗೊಳಗಾಗಿ, ಸಂತ್ರಸ್ತರಾದವರಿಗೆ ಕೂಡಲೇ ವರದಿ ಪಡೆದು ಸರ್ಕಾರದಿಂದ ದೊರೆಯುವ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರಪಾಲಿಕೆ ಸದಸ್ಯರಾದ ದಿನೇಶ್ ಕೆ.ಶೆಟ್ಟಿ, ಪರಶುರಾಮ್, ಗೋಣೆಪ್ಪ, ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಮಂಜುನಾಥ್ ಬಳ್ಳಾರಿ, ನಗರಪಾಲಿಕೆ ಮುಖ್ಯ ಎಂಜಿನಿಯರ್ ಬಿ.ಟಿ.ಮೋಹನ್ ಇದ್ದರು.

ಚೆಕ್ ವಿತರಣೆ: ನಂತರ ಸಚಿವರು ಗೃಹ ಕಚೇರಿಯಲ್ಲಿ, ನಗರದಲ್ಲಿ `ದೂಡಾ' ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲ್ವೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕಾಮಗಾರಿಗೆ ಮೊದಲ ಕಂತಾಗಿ ಬಿಡುಗಡೆಯಾಗಿರುವ ರೂ 5 ಕೋಟಿ ಮೊತ್ತದ ಚೆಕ್ ಅನ್ನು ರೈಲ್ವೆ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಂಪತ್‌ಕುಮಾರ್ ಅವರಿಗೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT