ADVERTISEMENT

ತೆವಳುತ್ತಿರುವ ರಾಜ್ಯ ಹೆದ್ದಾರಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 5:33 IST
Last Updated 4 ಜುಲೈ 2013, 5:33 IST

ಜಗಳೂರು: ಪಟ್ಟಣದಿಂದ ದೊಣೆಹಳ್ಳಿಯ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಅರಬಾವಿ -ಚಳ್ಳಕೆರೆ ಹೆದ್ದಾರಿ ಕಾಮಗಾರಿ 2 ವರ್ಷದಿಂದ ಆಮೆಗತಿಯಲ್ಲಿ ಸಾಗಿದ್ದು, ಹಲವು ಅಪಘಾತಗಳಿಗೆ ಕಾರಣವಾಗಿದೆ.

10 ಕಿಮೀ ಅಂತರದ ರೂ 20 ಕೋಟಿ ವೆಚ್ಚದ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಹೆದ್ದಾರಿ ಯೋಜನೆ (ಕೆಶಿಪ್) ನಿರ್ವಹಿಸುತ್ತಿದೆ.  ಒಂದು ವರ್ಷದಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಎರಡು ವರ್ಷದಿಂದ ಕುಂಟುತ್ತಾ ಸಾಗಿದೆ. ರಸ್ತೆ ನಿರ್ಮಾಣ ಕಾಮಗಾರಿಯನ್ನುಆಂಧ್ರ ಮೂಲದ  ಕಂಪನಿಗೆ ಗುತ್ತಿಗೆ ನೀಡಲಾಗಿದೆ.

ಒಂದು ವರ್ಷದ ಹಿಂದೆ ಹೊಸ ರಸ್ತೆ ನಿರ್ಮಾಣಕ್ಕಾಗಿ ಹಳೆಯ ಡಾಂಬರೀಕರಣ ರಸ್ತೆಯನ್ನು   ಅಗೆದು ಹಾಕಲಾಗಿದೆ. ಹಲವು ಹಂತದ ಮೆಟ್ಲಿಂಗ್ ಕಾಮಗಾರಿ ಮುಗಿದಿದ್ದರೂ ಡಾಂಬರೀಕರಣ ಕಾಮಗಾರಿ ಕೈಗೊಳ್ಳದ ಹಿನ್ನೆಲೆಯಲ್ಲಿ  ಇಡೀ ರಸ್ತೆ ದೂಳಿನಲ್ಲಿ ಮುಳುಗಿದ್ದು ಸಾಕಷ್ಟು ಅನಾಹುತಕ್ಕೆ ಕಾರಣವಾಗಿದೆ.   ರಸ್ತೆಯ ಇಕ್ಕೆಲಗಳಲ್ಲಿ ದಟ್ಟ ಧೂಳಿನಿಂದಾಗಿ ನೂರಾರು ಎಕರೆಯಲ್ಲಿ ಬೆಳೆ ಹಾನಿಯಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳ ಅಪಘಾತ ಇಲ್ಲಿ ಸಾಮಾನ್ಯವಾಗಿದ್ದು,  ಈಗಾಗಲೇ ಇಬ್ಬರ ಜೀವಗಳು ಬಲಿಯಾಗಿವೆ.

ದೊಣೆಹಳ್ಳಿಯ ಜಿನಿಗಿ ಹಳ್ಳಕ್ಕೆ 1930ರ ದಶಕದಲ್ಲಿ ಮೈಸೂರು ಮಹಾರಾಜರ ಆಡಳಿತದಲ್ಲಿ ಮಂತ್ರಿಯಾಗಿದ್ದ ಇಮಾಂಸಾಬ್ ಅವರಿಂದ ನಿರ್ಮಿಸಲಾಗಿರುವ ಸೇತುವೆ ಇದೆ. ಇದರ ಬುಡದಲ್ಲಿ ಹೊಸ ಸೇತುವೆ ಕಾಮಗಾರಿಗಾಗಿ ಆಳವಾದ ಕಂದಕಗಳನ್ನು ತೋಡಲಾಗಿದೆ. ಕಂದಕದಲ್ಲಿ ಭಾರಿ ಪ್ರಮಾಣದ  ಮಳೆ ನೀರು ಸಂಗ್ರಹವಾಗಿದ್ದು, ಐತಿಹಾಸಿಕ ಸೇತುವೆ ಶಿಥಿಲಾವಸ್ಥೆ ತಲುಪಿದೆ. 

80 ವರ್ಷಗಳ ಹಿಂದಿನ ಹಳೆಯ ಹಾಗೂ ಕಿರಿದಾದ ಸೇತುವೆ ಮೇಲೆ ಭಾರಿ ವಾಹನಗಳು  ಆತಂಕಕಾರಿ ಸ್ಥಿತಿಯಲ್ಲಿ ಸಂಚರಿಸುತ್ತಿವೆ. ಪ್ರತಿ ವಾಹನ ಸಂಚಾರದ ವೇಳೆ ಇಡೀ ಸೇತುವೆ ಅಲ್ಲಾಡುತ್ತಿದ್ದು, ಪ್ರಯಾಣಿಕರು  ಅಂಗೈಯಲ್ಲಿ ಜೀವ ಹಿಡಿದು ಸಂಚರಿಸಬೇಕಾದ ಸ್ಥಿತಿ ಇದೆ.   ಜಿನಿಗಿ ಹಳ್ಳಕ್ಕೆ ಬೃಹತ್ ಚೆಕ್‌ಡ್ಯಾಂ ನಿರ್ಮಿಸಿದ್ದು, ಹಿನ್ನೀರಿನಲ್ಲಿ ಸೇತುವೆ ಕಾಮಗಾರಿಯ ಭಾರಿ ಗಾತ್ರದ ಕಬ್ಬಿಣದ ರಾಡ್‌ಗಳು ಮುಳುಗಿವೆ. ನಿರ್ಮಾಣ ಹಂತದಲ್ಲಿ ಬೃಹತ್ ಕಾಂಕ್ರೀಟ್ ಕಂಬಗಳಿಗಾಗಿ ಅಳವಡಿಸಿರುವ  ಕಬ್ಬಿಣದ ರಾಡ್‌ಗಳು  ನೀರಿನಲ್ಲಿ ಮುಳುಗಿ ತುಕ್ಕು ಹಿಡಿಯುವ ಸಾಧ್ಯತೆ ಇದೆ.

ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಜ್ಲ್ಲಲಿಕಲ್ಲಿನ ಸಮಸ್ಯೆಯಿಂದ ಸಕಾಲದಲ್ಲಿ ಡಾಂಬರೀಕರಣ ಕಾರ್ಯ ವಿಳಂಬವಾಗಿದೆ ಎನ್ನುವುದು ಕೆಶಿಪ್ ಅಧಿಕಾರಿಗಳು ಹೇಳುತ್ತಾರೆ.  ರಸ್ತೆ ನಿರ್ಮಾಣದ ಹೊಣೆ ಹೊತ್ತಿರುವ ಆಂಧ್ರ ಮೂಲ ಕಂಪನಿಯು ನಿಗದಿತ ಅವಧಿಯಲ್ಲಿ ರಸ್ತೆ ನಿರ್ಮಿಸದೆ  ಷರತ್ತುಗಳನ್ನು ಉಲ್ಲಂಘಿಸಿದ್ದು, ಕಂಪನಿಯ ವಿರುದ್ಧ ಕ್ರಮಕೈಗೊಳ್ಳಬೇಕು. ತುರ್ತಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.