ADVERTISEMENT

ದಲಿತರ ಹಕ್ಕೊತ್ತಾಯಕ್ಕೆ ಆಗ್ರಹಿಸಿ ‘ಬೃಹತ್‌ ರ್‍ಯಾಲಿ’

ಬ್ಯಾಕ್‌ಲಾಗ್‌ ಹುದ್ದೆ ಭರ್ತಿಗೆ ಆಗ್ರಹ, ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 5:55 IST
Last Updated 1 ಜನವರಿ 2014, 5:55 IST

ದಾವಣಗೆರೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ದಲಿತರ ಹಕ್ಕೊತ್ತಾಯಕ್ಕೆ ಆಗ್ರಹಿಸಿ, ನಗರದಲ್ಲಿ ಸೋಮವಾರ ಜಿಲ್ಲಾಮಟ್ಟದ ಬೃಹತ್‌ ರ್‍ಯಾಲಿ ನಡೆಸಿದರು.

ನ್ಯಾ.ಸದಾಶಿವ ಆಯೋಗ ನೀಡಿರುವ ಒಳ ಮೀಸಲಾತಿ ವರ್ಗೀಕರಣ ವರದಿ ಅಂಗೀಕರಿಸಿ, ಅನುಮೋದನೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಮಾದಿಗ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ವಿಧಾನಸಭಾ ಕ್ಷೇತ್ರವಾರು ಬಗರ್‌ಹುಕುಂ ಸಮಿತಿ ರಚಿಸಿ, ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮಹಿಳಾ ಅಭಿವೃದ್ಧಿ ನಿಗಮಗಳ ಆಯ್ಕೆ ಸಮಿತಿಗಳಿಗೆ ಸಾಮಾಜಿಕ ಸೇವಾ ನಿರತರ ಹಾಗೂ ಚಳವಳಿಗಾರರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು. ವಿವಿಧ ಇಲಾಖೆಗಳಲ್ಲಿ ಇರುವ ಬ್ಯಾಕ್‌ಲಾಗ್‌ ಹುದ್ದೆ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ದಲಿತ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಸಾಶನಕ್ಕಾಗಿ ನಿಗದಿಪಡಿಸಿರುವ ವಯಸ್ಸಿನ ಮಿತಿಯನ್ನು 50 ವರ್ಷಕ್ಕೆ ನಿಗದಿ ಮಾಡಬೇಕು. ಅಂಬೇಡ್ಕರ್‌ ಭವನದ ಕಾಮಗಾರಿ ಸೂಕ್ತ ಸ್ಥಳದಲ್ಲಿ ಆರಂಭಿಸಬೇಕು. ದಲಿತರಿಗೆ ಪ್ರತ್ಯೇಕ ಸ್ಮಶಾನಕ್ಕಾಗಿ ಜಿಲ್ಲೆಯ ಎಲ್ಲ ಹಳ್ಳಿಗಳಲ್ಲೂ ಜಮೀನು ನೀಡಬೇಕು. ದೇವದಾಸಿಯರಿಗೆ ಕನಿಷ್ಠ ₨ 2 ಸಾವಿರ ಮಾಸಾಶನ, ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸಂಘಟನಾ ಸಂಚಾಲಕ ಎಂ.ಗುರುಮೂರ್ತಿ, ಕುಂದುವಾಡ ಮಂಜುನಾಥ್‌, ಹೆಗ್ಗೆರೆ ರಂಗಪ್ಪ, ಗಂಗನಕಟ್ಟೆ ಹನುಮಂತಪ್ಪ, ಶಶಿಕಲಾ , ಕಂದಗಲ್‌ ನಿಂಗಪ್ಪ, ಪರಮೇಶ್‌, ಸುರೇಶ್‌ ದೊಡ್ಡಮನಿ, ಹಾಲೇಶ್‌, ವೆಂಕಟೇಶ್‌, ಬೇತೂರು ಮಂಜುನಾಥ್‌, ಉದಯಕುಮಾರ್‌ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.