ADVERTISEMENT

ದೀಪಾವಳಿಗೆ ಬಾಳೆ ರೂಪದಲ್ಲಿ ಬಂದ ಧನಲಕ್ಷ್ಮಿ!

ಎನ್.ವಿ.ರಮೇಶ್
Published 20 ಅಕ್ಟೋಬರ್ 2017, 6:32 IST
Last Updated 20 ಅಕ್ಟೋಬರ್ 2017, 6:32 IST
ಬಸವಾಪಟ್ಟಣದ ಪ್ರಗತಿಪರ ರೈತ ಎಸ್.ಜಿ.ಸಣ್ಣಚನ್ನಪ್ಪ ತಾವು ಬೆಳೆದ 25 ಕೆ.ಜಿ ತೂಗುವ ಏಲಕ್ಕಿ ಬಾಳೆಯ ಗೊನೆಗಳೊಂದಿಗೆ.
ಬಸವಾಪಟ್ಟಣದ ಪ್ರಗತಿಪರ ರೈತ ಎಸ್.ಜಿ.ಸಣ್ಣಚನ್ನಪ್ಪ ತಾವು ಬೆಳೆದ 25 ಕೆ.ಜಿ ತೂಗುವ ಏಲಕ್ಕಿ ಬಾಳೆಯ ಗೊನೆಗಳೊಂದಿಗೆ.   

ಬಸವಾಪಟ್ಟಣ: ಇಲ್ಲಿನ ಪ್ರಗತಿಪರ ರೈತ ಎಸ್‌.ಜಿ.ಸಣ್ಣಚನ್ನಪ್ಪ ತಮ್ಮ ಮೂರು ಎಕರೆ ಹೊಲದಲ್ಲಿ ಬೆಳೆದಿರುವ ಏಲಕ್ಕಿ ಬಾಳೆ ಈ ಬಾರಿ ಬಂಪರ್ ಬೆಳೆ ನೀಡಿದೆ. ಎರಡು ವರ್ಷ ಮಳೆಯಿಲ್ಲದೇ ಅಂತರ್ಜಲ ಕಡಿಮೆಯಾಗಿ, ರೈತರೆಲ್ಲರೂ ಮುಗಿಲ ಕಡೆಗೆ ನೋಡುತ್ತಿದ್ದ ಪರಿಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಧೃತಿಗೆಡದೆ ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡ ಅವರು ಗಿಡಗಳನ್ನು ಬದುಕಿಸಿಕೊಂಡರು.

‘ತೋಟಕ್ಕೆ ನೂರಾರು ಟ್ರ್ಯಾಕ್ಟರ್‌ ಲೋಡು ಫಲವತ್ತಾದ ಕೆರೆ ಮಣ್ಣು ಹಾಗೂ ಸಾವಯವ ಗೊಬ್ಬರ ಹಾಕಿದ್ದೇವೆ. ಅದರ ಜತೆ ಅಲ್ಪ ಪ್ರಮಾಣದಲ್ಲಿ ರಸಗೊಬ್ಬರದ ಬಳಕೆ ಮಾಡಿದ್ದೇವೆ. ಎಕರೆಗೆ 425 ಗಿಡಗಳಂತೆ ಮೂರು ಎಕರೆಗಳಲ್ಲಿ 1,200 ಗಿಡಗಳನ್ನು ಬೆಳೆಸಿದ್ದೇವೆ’ ಎಂದು ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟರು.

‘ಬಾಳೆ ಕೃಷಿಗೆ ದಾವಣಗೆರೆಯ ತರಳಬಾಳು ಕೃಷಿ ಕೇಂದ್ರದ ವಿಜ್ಞಾನಿ ಡಾ.ಎಂ.ಜಿ.ಬಸವನಗೌಡ ಮತ್ತು ದಾಗಿನಕಟ್ಟೆಯ ಪ್ರಗತಿಪರ ರೈತ ಓ.ಜಿ.ಕಿರಣ್‌ ಮಾರ್ಗದರ್ಶನ ಮಾಡಿದರು’ ಎಂದೂ ಅವರು ಸ್ಮರಿಸಿದರು.

ADVERTISEMENT

‘ಮೂರು ಎಕರೆಗೆ ನಾವು ಒಂದು ₹ 1 ಲಕ್ಷ ಖರ್ಚು ಮಾಡಿದ್ದೇವೆ. ಈಗ ಪ್ರತಿ ಕೆ.ಜಿ ಬಾಳೆಕಾಯಿಗೆ ₹ 40ರಿಂದ ₹ 45 ಸಿಗುತ್ತಿದೆ. ಇದರಿಂದ ಬೆಳೆದದ್ದು ಸಾರ್ಥಕವಾಗಿದೆ’ ಎನ್ನುತ್ತಾರೆ ಅವರ ಪುತ್ರ ಜಿ.ಸಿ.ಕುಮಾರ್‌.

‘ಬಾಳೆಗೆ ಈ ಬಾರಿ ಹೆಚ್ಚಿನ ರೋಗ ಕಂಡು ಬಂದಿಲ್ಲ. ಇತ್ತೀಚೆಗೆ ಒಂದು ತಿಂಗಳಿನಿಂದ ಬಿದ್ದ ಮಳೆಗೆ ಫಸಲು ಚೇತರಿಸಿಕೊಂಡಿದ್ದು, ಪ್ರತಿ ಗಿಡದಲ್ಲಿಯೂ ಭಾರಿ ಪ್ರಮಾಣದ ಗೊನೆಗಳು ಬಿಟ್ಟಿವೆ. ಸಾಮಾನ್ಯವಾಗಿ ಏಲಕ್ಕಿ ಬಾಳೆ ಗೊನೆಗಳು ಎಂಟರಿಂದ 10 ಕೆ.ಜಿ. ತೂಗುತ್ತವೆ. ಆದರೆ, ನಮ್ಮ ತೋಟದಲ್ಲಿ 20ರಿಂದ 25 ಕೆ.ಜಿ ತೂಗುತ್ತಿವೆ’ ಎಂದು ಸಂತಸ ವ್ಯಕ್ತಪಡಿಸಿದರು.

ಬಾಳೆ ಬೆಳೆಯಲು ಈ ಭಾಗದ ಮಣ್ಣು ಉತ್ತಮವಾಗಿದೆ. ಅಡಿಕೆ ಮತ್ತು ತೆಂಗಿನ ಮರಗಳ ಮಧ್ಯದಲ್ಲಿ ಉಪ ಬೆಳೆಯಾಗಿ ಬೆಳೆಯಲಾಗುತ್ತಿದೆ. ಫಸಲು ಸಂಪೂರ್ಣವಾಗಿ ಕಟಾವು ಆಗುವ ವೇಳೆಗೆ ಇದೇ ದರ ಮುಂದುವರಿದರೆ ರೈತರಿಗೆ ₹ 7ರಿಂದ ₹ 8 ಲಕ್ಷ ಲಾಭ ಬರಬಹುದು ಎನ್ನುತ್ತಾರೆ ಇಲ್ಲಿನ ಹಣ್ಣು ತರಕಾರಿಗಳ ಸಗಟು ವ್ಯಾಪಾರಿ ಸೈಯದ್‌ ಹಿದಾಯತ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.