ADVERTISEMENT

ದುರಸ್ತಿಯಾಗದ ಕೈಪಂಪ್: ತಪ್ಪದ ನೀರಿನ ಗೋಳು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 9:10 IST
Last Updated 12 ಏಪ್ರಿಲ್ 2011, 9:10 IST
ದುರಸ್ತಿಯಾಗದ ಕೈಪಂಪ್: ತಪ್ಪದ ನೀರಿನ ಗೋಳು
ದುರಸ್ತಿಯಾಗದ ಕೈಪಂಪ್: ತಪ್ಪದ ನೀರಿನ ಗೋಳು   

ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಕೈಪಂಪ್‌ಗಳನ್ನು ದುರಸ್ತಿಗೊಳಿಸದೇ ಇರುವುದರಿಂದ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನೀರಿಗೆ ತುಂಬಾ ತೊಂದರೆಯಾಗಿದೆ.

 ಪ.ಪಂ. ಅಥವಾ ಗ್ರಾ.ಪಂ.ಗಳು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾದಾಗ ಸಾರ್ವಜನಿಕರಿಗೆ ನೀರಿಗೆ ತೊಂದರೆಯಾಗದಿರಲಿ ಎಂಬ ಕಾರಣದಿಂದ ಕೈಪಂಪ್‌ಗಳನ್ನು ಹಾಕಲಾಗುತ್ತದೆ. ಈ ಹಿಂದೆ ಕೈಪಂಪ್‌ಗಳ ನಿರ್ವಹಣೆಯನ್ನು ತಾ.ಪಂ. ಹೊಂದಿತ್ತು. ಯಾವಾಗ ತಾ.ಪಂ. ಯಿಂದ ಸ್ಥಳೀಯ ಆಡಳಿತಕ್ಕೆ ನಿರ್ವಹಣೆ ಹೊಣೆಯನ್ನು ನೀಡಲಾಯಿತೋ ಅಂದಿನಿಂದ ಕೈಪಂಪ್‌ಗಳು ಸರಿಯಾಗಿ ದುರಸ್ತಿ ಕಾಣದೇ ಅನಾಥವಾಗಿ ಕೆಟ್ಟು ನಿಲ್ಲುವ ಪರಿಸ್ಥಿತಿ ಬಂದೊದಗಿದೆ ಎನ್ನುತ್ತಾರೆ ನಾಗರಿಕರು.

ತಾಲ್ಲೂಕಿನ ಗ್ರಾಮಗಳಲ್ಲಿ ಲೆಕ್ಕವಿಲ್ಲದಷ್ಟು ಕೈಪಂಪ್‌ಗಳಿವೆ. ಇದಕ್ಕಾಗಿ ಕೊಳವೆಬಾವಿಗಳನ್ನು ಕೊರೆಸಲು ಕೋಟ್ಯಂತರ ಹಣ ವಿನಿಯೋಗಿಸಲಾಗಿದೆ. ಅದರಲ್ಲೂ ಹಲವಾರು ಜನಸಂದಣಿಯೇ ಇಲ್ಲದ ರಸ್ತೆಗಳ ಪಕ್ಕಗಳಲ್ಲಿ ಕೊಳವೆಬಾವಿ ಕೊರೆಸಿ ಕೈಪಂಪ್‌ಗಳನ್ನು ಅಳವಡಿಸಲಾಗಿದೆ. ಅಂತಹ ಕೆಲ ಕೊಳವೆಬಾವಿಗಳಲ್ಲಿ ನೀರು ಬಾರದಿರುವುದು ಸಾಮಾನ್ಯ ಎನ್ನುವಷ್ಟು ಅದು ಪ್ರಚಲಿತವಾಗಿದೆ.

ಚನ್ನಗಿರಿಯನ್ನೇ ಉದಾಹರಣೆ ತೆಗೆದುಕೊಂಡರೆ ಇಲ್ಲಿ ಬೀದಿಗೊಂದು ಕೈಪಂಪ್‌ಗಳಿವೆ. ಆದರೆ, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದು ಬೆರಳಣಿಕೆಯಷ್ಟು ಮಾತ್ರ. ಇಲ್ಲಿ ಕುಡಿಯುವ ನೀರು ಬಿಡುವುದೇ ವಾರಕ್ಕೊಮ್ಮೆ. ಇನ್ನುಳಿದ ದಿನಗಳಲ್ಲಿ ಕೈಪಂಪ್‌ಗಳು ಸಾರ್ವಜನಿಕರ ನೀರಿನ ಬೇಡಿಕೆಯನ್ನು ಪೂರೈಸುತ್ತಿದ್ದವು. ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿರುವ ಕೈಪಂಪ್ ಕೆಟ್ಟು ಒಂದು ವರ್ಷ ಕಳೆದಿದೆ.
 
ಆದರೆ, ದುರಸ್ತಿಯ ಭಾಗ್ಯವನ್ನು ಮಾತ್ರ ಕಂಡಿಲ್ಲ. ಅವುಗಳನ್ನು ದುರಸ್ತಿ ಮಾಡಲು ಪ.ಪಂ. ಯವರು ನಿರ್ಲಕ್ಷ್ಯವಹಿಸಿದ್ದಾರೆ. ಹೀಗೆ ಪಟ್ಟಣದಲ್ಲಿ ಹಲವಾರು ಕಡೆ ಕೈಪಂಪ್‌ಗಳು ದುರಸ್ತಿಯ ಭಾಗ್ಯವನ್ನು ಕಂಡಿಲ್ಲ ಎನ್ನುತ್ತಾರೆ ನಾಗರಿಕರಾದ ರಾಜಶೇಖರ್, ಸಂದೀಪ್, ಯೋಗೇಶ್.ಕೈಪಂಪ್‌ಗಳ ದುರಸ್ತಿಯ ನಿರ್ವಹಣೆಯನ್ನು ಈ ಹಿಂದೆ ಇದ್ದಂತೆ ತಾ.ಪಂ.ಗೆ ವಹಿಸಿದರೆ ಉತ್ತಮ ಎಂಬುದು ಸಾರ್ವಜನಿಕರ ಒಕ್ಕೊರಲಿನ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.