ಬಸವಾಪಟ್ಟಣ: ಇಲ್ಲಿನ ಚಿನ್ಮೂಲಾದ್ರಿ ಬೆಟ್ಟ ಶ್ರೇಣಿಯಲ್ಲಿರುವ ಪುರಣ ಪ್ರಸಿದ್ಧ ಶಕ್ತಿ ದೇವತೆ ದುರ್ಗಾದೇವಿಯ ಸಿಡಿ ಉತ್ಸವ ಶುಕ್ರವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. 40 ಅಡಿ ಉದ್ದ, ಎರಡು ಅಡಿ ಸುತ್ತಳತೆಯ ಬಲವಾದ ಕಂಬದ ತುದಿಗೆ ಕಟ್ಟಿದ ದೇವಿಯ ಕಳಶ ಮತ್ತು ಬೆತ್ತವನ್ನು ಮೂರು ಬಾರಿ ತಿರುಗಿಸುತ್ತಿದ್ದಂತೆ ಸೇರಿದ್ದ ಸಹಸ್ರಾರು ಭಕ್ತರ ಕಂಠದಿಂದ ಹೊರಟ ಉಧೋ ಎಂಬ ಧ್ವನಿ ಮುಗಿಲು ಮುಟ್ಟಿತು.
ಒಂದು ವಾರ ನಡೆಯುವ ಈ ಉತ್ಸವದಲ್ಲಿ ಇಂದು ನಡೆಯುವ ಸಿಡಿ ಉತ್ಸವ ಅತ್ಯಂತ ಮುಖ್ಯವಾಗಿದ್ದು, ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ಸುತ್ತಲಿನ ಹಳ್ಳಿಗಳಿಂದ ರೈತರು ಪಾನಕದ ಹಂಡೆಗಳನ್ನು ಹೇರಿಕೊಂಡು ಕಡಿದಾದ ಬೆಟ್ಟದ ಹಾದಿಯಲ್ಲಿ ಒಂದೇ ಎತ್ತು ಹೂಡಿದ ಬಂಡಿಗಳನ್ನು ಮೇಲಕ್ಕೆ ಹತ್ತಿಸುವ ದೃಶ್ಯ ಮೈನವಿರೇಳಿಸಿತು. ಇನ್ನು ಅಂದವಾಗಿ ಶೃಂಗರಿಸಿದ ಬಂಡಿಗಳಲ್ಲಿ ಬಣ್ಣ ಬಣ್ಣದ ಮೇಲು ಹೊದಿಕೆ ಹೊದಿಸಿದ ಎತ್ತುಗಳನ್ನು ಹೂಡಿಕೊಂಡು ತಮ್ಮ ಕುಟುಂಬದವರೊಂದಿಗೆ ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸುವ ದೃಶ್ಯ ಮನಮೋಹಕವಾಗಿತ್ತು.
ಈ ಎತ್ತಿನ ಬಂಡಿಗಳೊಂದಿಗೆ ಪೈಪೋಟಿ ನಡೆಸಿದ ಹಲವಾರು ಟ್ರ್ಯಾಕ್ಟರ್‌ಗಳಲ್ಲಿ ಬಂದ ಭಕ್ತರ ಸಂಖೈಯೂ ಮಿತಿ ಮೀರಿತ್ತು. ಇಡೀ ಬೆಟ್ಟ ಹಾಗೂ ಇಲಿನ ರಸ್ತೆಗಳು ಹೊಸ ಉಡುಪು ಧರಿಸಿದ ಯುವ ದಂಪತಿಗಳೊಂದಿಗೆ ಮಕ್ಕಳು, ವೃದ್ಧರೂ ಸಹಾ ಉತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ದುರ್ಗಾದೇವಿಯ ಉತ್ಸವ ಮೂರ್ತಿಯೊಂದಿಗೆ ಸಂಗಾಹಳ್ಳಿಯ ಬಸವೇಶ್ವರ, ಬೆಳಲಗೆರೆಯ ಬೀರಲಿಂಗೇಶ್ವರ, ಕಣಿವೆ ಬಿಳಚಿಯ ದುರ್ಗಾದೇವಿಯ ಉತ್ಸವ ಮೂರ್ತಿಗಳ ಪಾಲಕಿಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದ್ದವು. ಬಸವಾಪಟ್ಟಣದ ಕೆಲವು ಯುವಕರು ಉತ್ಸವಕ್ಕೆ ಬಂದ ಸಹಸ್ರಾರು ಜನರಿಗೆ ಉಚಿತವಾಗಿ ಮುಂಜಾನೆಯಿಂದ ಸಂಜೆಯವರೆಗೆ ಪಾನಕ ಮತ್ತು ಮಜ್ಜಿಗೆ ವಿತರಿಸಿ, ಅವರ ದಾಹ ನೀಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.