ADVERTISEMENT

ದೇವನಗರಿಯಲ್ಲಿ ಯೋಗಾಯೋಗ; ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 5:08 IST
Last Updated 18 ಜೂನ್ 2017, 5:08 IST
ಅಂತರರಾಷ್ಟ್ರೀಯ ಯೋಗದಿನಾಚರಣೆ ಪೂರ್ವಭಾವಿಯಾಗಿ ಶನಿವಾರ ನಗರದಲ್ಲಿ ಯೋಗ ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು
ಅಂತರರಾಷ್ಟ್ರೀಯ ಯೋಗದಿನಾಚರಣೆ ಪೂರ್ವಭಾವಿಯಾಗಿ ಶನಿವಾರ ನಗರದಲ್ಲಿ ಯೋಗ ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು   

ದಾವಣಗೆರೆ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಶನಿವಾರ ನಗರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಬೃಹತ್ ಯೋಗ ಪ್ರಾತ್ಯಕ್ಷಿಕೆ ಹಾಗೂ ಯೋಗ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ 50ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು, ಯೋಗಾಸಕ್ತರು, ಸಾರ್ವಜನಿಕರು, ಅಧಿಕಾರಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಶ್ವಾಸಗುರು ವಚನಾನಂದ ಸ್ವಾಮೀಜಿ ಸರಳವಾಗಿ ಪ್ರಾತ್ಯಕ್ಷಿಕೆ ಮೂಲಕ ಎಲ್ಲರಿಗೂ ಯೋಗ ಹೇಳಿಕೊಟ್ಟರು. ಬಳಿಕ ಮಾತನಾಡಿ, ‘ಯೋಗ ಹಾಗೂ ಧ್ಯಾನದಿಂದ ಆರೋಗ್ಯ ಆಯಸ್ಸು ವೃದ್ಧಿಯಾಗುತ್ತದೆ. ಜೀವನದಲ್ಲಿ ಯಶಸ್ಸಿಗೆ ಯೋಗವೂ ಸಹಕಾರಿಯಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ದೈಹಿಕ ಆರೋಗ್ಯಕ್ಕಾಗಿ ಯೋಗ ಅತ್ಯಗತ್ಯ. ಯೋಗದಿಂದ ವಿನಯ ಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬರೂ ಯೋಗಭ್ಯಾಸ ರೂಢಿಸಿಕೊಳ್ಳಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.

ಯೋಗನಡಿಗೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌.ಗುಳೇದ, ಜಿಲ್ಲಾ ಪಂಚಾಯ್ತಿ ಸಿಇಒ ಎಸ್.ಅಶ್ವತಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್, ಮೇಯರ್ ಅನಿತಾಬಾಯಿ ಮಾಲತೇಶ್‌ ರಾವ್, ಡಿಡಿಪಿಐ ಎಚ್‌.ಎಂ.ಪ್ರೇಮಾ ಹಾಗೂ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

12,000ಕ್ಕೂ ಹೆಚ್ಚು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ನಡಿಗೆಯಲ್ಲಿ ಪಾಲ್ಗೊಂಡು ಯೋಗದ ಮಹತ್ವವನ್ನು ಸಾರಿದರು. ನಗರದ ಪ್ರಮುಖ ವೃತ್ತಗಳಲ್ಲಿ ಸಾಗಿದ ಜಾಥಾ ಸುಮಾರು 3 ಕಿ.ಮೀ. ಕ್ರಮಿಸಿ ಮೋತಿವೀರಪ್ಪ ಕಾಲೇಜು ತಲುಪಿತು. ಬ್ರಹ್ಮಕುಮಾರಿ ಸಂಸ್ಥೆಯ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಉಪ ಮೇಯರ್ ಮಂಜಮ್ಮ, ಪಾಲಿಕೆ ಸದಸ್ಯೆ ಅಶ್ವಿನಿ ಪ್ರಶಾಂತ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು.ಸಿದ್ದೇಶ್, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಬಿ.ಸಿ.ಉಮಾಪತಿ, ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್, ಬ್ರಹ್ಮಕುಮಾರಿ, ಪತಂಜಲಿ, ಎಎಫ್‌ಐ, ಎನ್‌ಐಎಂಎ, ಅಶ್ವಿನಿ ಹಾಗೂ ತಪೋವನ ಆಯುರ್ವೇದಿಕ್‌ ಕಾಲೇಜು ವಿದ್ಯಾರ್ಥಿಗಳು, ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.