ADVERTISEMENT

ದೇಶದಲ್ಲಿ ಮಹಿಳೆ– ದಲಿತರ ಸ್ಥಿತಿ ಭಿನ್ನವಾಗಿಲ್ಲ

ಮಹಿಳಾ ದಿನಾಚರಣೆಯಲ್ಲಿ ಎಸ್‌ಐಎಫ್‌ಟಿಯು ಅಧ್ಯಕ್ಷ ಸೆಬಾಸ್ಟಿಯನ್‌ ದೇವರಾಜ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 7:41 IST
Last Updated 9 ಏಪ್ರಿಲ್ 2018, 7:41 IST

ದಾವಣಗೆರೆ: ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆಯಿಂದ ಸುಂದರ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಎಸ್‌ಐಎಫ್‌ಟಿಯು ಅಧ್ಯಕ್ಷ ಸೆಬಾಸ್ಟಿಯನ್‌ ದೇವರಾಜ್‌ ಅಭಿಪ್ರಾಯಪಟ್ಟರು.

ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ನೆರಳು ಬೀಡಿ ಕಾರ್ಮಿಕರ ಯೂನಿಯನ್, ಕರ್ನಾಟಕ ಗಾರ್ಮೆಂಟ್ಸ್‌ ವರ್ಕರ್ಸ್‌ ಯೂನಿಯನ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ, ಮಹಿಳಾ ಕಾರ್ಮಿಕರ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಸ್ವಹಿತಕ್ಕಿಂತ ಸಮಾಜದ ಹಿತಕ್ಕಾಗಿ ದುಡಿಯುವಂಥವರು. ಅಂಥವರನ್ನು ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಕೀಳಾಗಿ ಕಾಣಲಾಗುತ್ತಿದೆ. ಸಮಾನ ವೇತನ, ಸಮಾನ ಗೌರವ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮಹಿಳೆ ಮುಖ್ಯವಾಹಿನಿಗೆ ಬಾರದಂತೆ ತಡೆಯಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಗಾರ್ಮೆಂಟ್ಸ್‌ಗಳಲ್ಲಿ ದುಡಿಯುತ್ತಿರುವ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಮಾಲೀಕರ ಶೋಷಣೆ, ದೌರ್ಜನ್ಯದ ವಿರುದ್ಧ ದನಿ ಎತ್ತಲಾಗದೆ, ವೇದನೆ ಅನುಭವಿಸುತ್ತಿದ್ದಾರೆ. ಸಮಾಜದ ವ್ಯವಸ್ಥೆ ಬದಲಾಗಬೇಕಾದರೆ, ಮಹಿಳೆಯರು ಸಂಘಟಿತರಾಗಬೇಕು. ಅನ್ಯಾಯದ ವಿರುದ್ಧ ಪ್ರತಿಭಟಿಸುವ ದಿಟ್ಟತನ ಬೆಳೆಸಿಕೊಳ್ಳಬೇಕು ಎಂದರು.

ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ನೀಡಬೇಕು ಎಂಬ ನಿಯಮವಿದ್ದರೂ ಪುರುಷ ಪ್ರಧಾನ ಸಮಾಜದಲ್ಲಿ ಅನುಷ್ಠಾನಗೊಂಡಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಕಡೆಗಣಿಸಲಾಗಿದೆ. ಕುಟುಂಬದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ ಎಂದು ಸೆಬಾಸ್ಟಿಯನ್‌ ಹೇಳಿದರು.

ಟ್ರೇಡ್‌ ಯೂನಿಯನ್‌ ಮುಖಂಡರಾದ ಉಷಾ ರವಿಕುಮಾರ್ ಮಾತನಾಡಿ, ‘ಬೀಡಿ ಕಾರ್ಮಿಕ ವೃತ್ತಿಯಲ್ಲಿ ಹಾಗೂ ಗಾರ್ಮೆಂಟ್ಸ್‌ಗಳಲ್ಲಿ ಮಹಿಳೆಯರು ಹೆಚ್ಚಾಗಿ ದುಡಿಯುತ್ತಿದ್ದು, ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ. ಸಂಘಟನೆ ಮೂಲಕ ಹಕ್ಕಿಗಾಗಿ ಹೋರಾಡಬೇಕು’ ಎಂದು ಕಿವಿಮಾತು ಹೇಳಿದರು.

ನೆರಳು ಬೀಡಿ ಕಾರ್ಮಿಕ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಎಂ.ಕರಿಬಸಪ್ಪ ಮಾತನಾಡಿ, ‘ಬೀಡಿ ಕಾರ್ಮಿಕರು ಸಾಮಾಜಿಕ, ಆರ್ಥಿಕ ಭದ್ರತೆ ಇಲ್ಲದೆ ದುಡಿಯುತ್ತಿದ್ದಾರೆ. ಹಲವರು ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದು, ಮೃತಪಟ್ಟರೆ ಬಿಡಿಗಾಸು ಪರಿಹಾರ ದೊರೆಯುವುದಿಲ್ಲ’ ಎಂದರು.

ಸರ್ಕಾರದಿಂದ ಬೀಡಿ ಕಾರ್ಮಿಕ ಜೀವನಕ್ಕೆ ಭದ್ರತೆ ಒದಗಿಸಿಲ್ಲ. ಬೀಡಿ ಕಂಪನಿ ಮಾಲೀಕರು ಕೆಲಸಕ್ಕೆ ತಕ್ಕ ವೇತನ ನೀಡುತ್ತಿಲ್ಲ. ಕಾರ್ಮಿಕರ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. ಕನಿಷ್ಠ ವೇತನ ದೊರೆಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಗುತ್ತಿಗೆ ಪೌರ ಕಾರ್ಮಿಕರಾದ ಮೈಲಮ್ಮ, ಚಪ್ಪಲಿ ಹೊಲೆಯುವ ಎಸ್‌.ಉಮಾದೇವಿ, ಕಟ್ಟಡ ಕಾರ್ಮಿಕರಾದ ಮುನೀರಾ ಬಿ, ಬೀಡಿ ಕಾರ್ಮಿಕರಾದ ರಮೀಜಾ ಬಿ, ಗಾರ್ಮೆಂಟ್ಸ್‌ ವರ್ಕರ್ಸ್‌ ಯೂನಿಯನ್‌ ಸದಸ್ಯೆ ಸುಜಾತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ ಸ್ವಾಗತಿಸಿ ನಿರೂಪಣೆ ಮಾಡಿದರು. ಆಯಿಷಾ ಸಿದ್ದಿಕಿ ವಂದಿಸಿದರು.

‘ಪೌರಕಾರ್ಮಿಕರ ಹುದ್ದೆಗಳಲ್ಲಷ್ಟೇ ಮೀಸಲಾತಿ’

ದೇಶದಲ್ಲಿ ಮಹಿಳೆಯರ ಹಾಗೂ ದಲಿತರ ಸ್ಥಿತಿ ಭಿನ್ನವಾಗಿಲ್ಲ. ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಮೇಲ್ವರ್ಗದವರೇ ತುಂಬಿಕೊಂಡಿದ್ದು, ಹೆಸರಿಗಷ್ಟೇ ದಲಿತರಿಗೆ ಮೀಸಲಾತಿ ಸಿಕ್ಕಿದೆ. ಚರಂಡಿ ಸ್ವಚ್ಛಗೊಳಿಸುವುದು, ಶೌಚಾಲಯ ಶುಚಿಗೊಳಿಸುವುದು, ನಗರದ ಕಸ ಸಂಗ್ರಹಿಸುವುದು, ಪೌರ ಕಾರ್ಮಿಕರ ಹುದ್ದೆಗಳಲ್ಲಿ ಮಾತ್ರ ದಲಿತರಿಗೆ ಶೇ 100 ಮೀಸಲಾತಿ ದೊರೆತಿದೆ ಎಂದು ಸೆಬಾಸ್ಟಿಯನ್‌ ಅಸಮಾಧಾನ ವ್ಯಕ್ತಪಡಿಸಿದರು.

ಬಂಡವಾಳಶಾಯಿ ವ್ಯವಸ್ಥೆ ಬಡವರನ್ನು ಮತ್ತಷ್ಟು ಬಡವರನ್ನಾಗಿಸುತ್ತಿದ್ದು, ದೇಶದ ಸಂಪತ್ತು ಕೆಲವೇ ಉದ್ಯಮಿಗಳ ಖಜಾನೆ ಸೇರುತ್ತಿದೆ. ಬ್ರಿಟಿಷರು ದೇಶಬಿಟ್ಟು ಹೋದರೂ, ಅವರ ಗುಣಗಳು ಮಾತ್ರ ದೇಶದಲ್ಲೇ ಉಳಿದುಕೊಂಡಿದ್ದು, ಬಡವರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.